100ಕ್ರೀಡಾ ತರಬೇತಿದಾರರ ನೇಮಕ: ಪ್ರಮೋದ್ ಮಧ್ವರಾಜ್
ಬೆಂಗಳೂರು, ಸೆ.13: ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ಸಲುವಾಗಿ 100 ಕ್ರೀಡಾ ತರಬೇತಿದಾರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕ್ರೀಡಾ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾ ತರಬೇತಿದಾರರಿಗೆ ಈ ಹಿಂದೆ 26ಸಾವಿರ ರೂ.ವೇತನ ನೀಡಲಾಗುತ್ತಿತ್ತು. ಅದನ್ನು ಪರಿಷ್ಕರಿಸಲಾಗಿದ್ದು, 39ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೂ ರಾಜ್ಯದಲ್ಲಿರುವ ಎಲ್ಲ ಕ್ರೀಡಾ ಹಾಸ್ಟೆಲ್‌ಗಳಿಗೂ ಸಮಾನವಾದ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರೀಡಾಪಟುಗಳ ತರಬೇತಿಗೆ ಅಗತ್ಯ ಆರ್ಥಿಕ ಸಹಾಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವ ಜನರಿಗೆ ಉದ್ಯೋಗಾವಕಾಶ ಹೆಚ್ಚಿಸಲು ವೃತ್ತಿಪರ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೂ ಸಾಹಸ ಕ್ರೀಡಾ ಪ್ರಶಿಕ್ಷಕರಾಗಲು ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ ಪ್ರಾರಂಭಿಸಿ ರಾಜ್ಯದ ಒಂದು ಸಾವಿರ ಪ್ರತಿಭಾವಂತ ಯುವ ಕ್ರೀಡಾಪಟುಗಳನ್ನು ಗುರುತಿಸಿ ಪೂರ್ಣ ಮಾಹಿತಿಗಳನ್ನೊಳಗೊಂಡ ದತ್ತಾಂಶ ಕೋಶ ಸ್ಥಾಪನೆ. ಕ್ರೀಡಾ ನ್ಯೂಟ್ರೀಷನ್, ಸೈಕಾಲಜಿ, ಮೆಡಿಸಿನ್, ಫಿಸಿಯೋಥೆರಪಿ ಮತ್ತಿತರ ಸೌಲಭ್ಯ ಒದಗಿಸಲು ಬೆಂಗಳೂರು ಕಂಠೀರವ ಕ್ರೀಡಾಂಗಣ ಮತ್ತು ಉಡುಪಿಯಲ್ಲಿ ತಲಾ 2ಕೋಟಿ ರೂ. ವೆಚ್ಚದಲ್ಲಿ ಎರಡು ಕ್ರೀಡಾ ವಿಜ್ಞಾನ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದರು.
ತಲಾ ಎರಡು ಕೋಟಿ ರೂ.ವೆಚ್ಚದಲ್ಲಿ ಬೆಳಗಾವಿ, ಉಡುಪಿ, ಮೈಸೂರು ಮತ್ತು ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ನಾಲ್ಕು ಜಿಮ್‌ಗಳ ಸ್ಥಾಪನೆ. ಹಾಗೂ ಬೆಳಗಾವಿ ಮತ್ತು ಮೈಸೂರಿನಲ್ಲಿ ಜಿಮ್ನಾಸ್ಟಿಕ್ ಸೌಲಭ್ಯ. ತಲಾ ಒಂದು ಕೋಟಿ ರೂ.ವೆಚ್ಚದಲ್ಲಿ ಬೆಳಗಾವಿ, ದಾವಣಗೆರೆ, ವಿಜಯಪುರ ಮತ್ತು ಉಡುಪಿಯಲ್ಲಿ ಮಹಿಳಾ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ವಸತಿ ನಿಲಯಹಗಳು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉಡುಪಿಯಲ್ಲಿ ಸಾಮರಸ್ಯವನ್ನು ಕದಡಲು ಷಡ್ಯಂತ್ರಗಳು ರೂಪಿಸುತ್ತಿವೆ. ಆದರೆ, ನಮ್ಮ ಪೊಲೀಸ್ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಹಾಗೂ ಉಡುಪಿ ಜನತೆ ಶಾಂತಿ ಬಯಸುವವರಾಗಿದ್ದು, ಕೋಮುವಾದಿಗಳನ್ನು ಉಡುಪಿಯಿಂದ ದೂರವಿಟ್ಟಿದ್ದಾರೆ.
-ಪ್ರಮೋದ್ ಮಧ್ವರಾಜ್ ಸಚಿವ, ಕ್ರೀಡಾ ಮತ್ತು ಮೀನುಗಾರಿಕೆ