‘ಐರಾವತ ಕ್ಲಬ್ ಕ್ಲಾಸ್’ ನೂತನ ಬಸ್ ಸೇವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Update: 2017-09-13 14:25 GMT

ಬೆಂಗಳೂರು, ಸೆ. 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ಐಷಾರಾಮಿ ಐರಾವತ ಕ್ಲಬ್ ಕ್ಲಾಸ್‌ನ 23 ಹೊಸ ಬಸ್ಸುಗಳ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ  ಚಾಲನೆ ನೀಡಿದರು.

ಬುಧವಾರ ವಿಧಾನಸೌಧ ವೈಭವೋಪೇತ ಮೆಟ್ಟಿಲುಗಳ ಬಳಿ(ಗ್ರ್ಯಾಂಡ್ ಸ್ಟೆಪ್ಸ್) ಬಳಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ಬಸ್‌ಗಳ ಲೋಕಾರ್ಪಣೆ ಹಾಗೂ ಸಾರಿಗೆ ಇಲಾಖೆ ನಾಲ್ಕು ವರ್ಷಗಳ ‘ಸಾರಿಗೆ ಕ್ಷೇತ್ರದಲ್ಲಿ ಸಾಧನೆಗಳ ಮೈಲಿಗಲ್ಲು’ ಕೈಪಿಡಿಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಸಾರಿಗೆ ಸಂಸ್ಥೆಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಬಂದಿದ್ದು, ಸಂಸ್ಥೆ ಹಲವು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ. ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕ ಹಲವು ಅಭಿವೃದ್ಧಿ ಯೋಜನೆಗಳು ಸಾಕಾರಗೊಂಡಿವೆ. ಜನರ ಜೀವನಾಡಿಯಾದ ಸಾರಿಗೆ ಕ್ಷೇತ್ರವು ಹಿಂದೆಂದೂ ಕಂಡರಿಯದಂತಹ ಹಲವು ಪ್ರಥಮಗಳಿಗೆ ನಾಂದಿ ಹಾಡುವ ಮೂಲಕ ರಾಷ್ಟ್ರದಲ್ಲಿಯೆ ಅಗ್ರಗಣ್ಯ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾರಿಗೆ ನಿಗಮಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿಕೆ ಮತ್ತು ಹೊಸ-ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ 4 ವರ್ಷದ ಸಾಧನೆಗೆ ಸಂದ ಪ್ರಶಸ್ತಿಗಳು 200ಕ್ಕೂ ಹೆಚ್ಚು ಎಂಬುದು ಹೆಮ್ಮೆಯ ಸಂಗತಿ ಎಂದು ತಿಳಿಸಲಾಗಿದೆ.

ಹೊಸ ಬಸ್ಸುಗಳ ವೈಶಿಷ್ಟ: ಕೆಎಸ್ಸಾರ್ಟಿಸಿ ಪ್ರಪ್ರಥಮ ಬಾರಿಗೆ ದೂರ ಪ್ರಯಾಣದ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ, ಉತ್ತಮ ‘ಲೆಗ್ ರೂಂ’ ವ್ಯವಸ್ಥೆ ಹೊಂದಿರುವ 13.8 (47 ಸೀಟುಗಳು) ಹಾಗೂ 14.5 ಮೀ.ಉದ್ದಳತೆಯ ಐರಾವತ-(51 ಸೀಟುಗಳ) ಹೊಸ ಬಸ್ಸುಗಳನ್ನು ಪರಿಚಯಿಸುತ್ತಿದೆ.

ಈ ವಾಹನಗಳಲ್ಲಿ, ಎಲೆಕ್ಟ್ರಾನಿಕ್ ನಿಯಂತ್ರಿತ ಉಪಕರಣದೊಂದಿಗೆ ನವೀನ ಬಿ.ಎಸ್.-4 ಎಂಜಿನ್ ಅಳವಡಿಸಲಾಗಿದೆ. ಸದರಿ ವಾಹನಗಳು ಮಾನವ ಚಾಲಿತ ಹಾಗೂ ಜಾಣ ಸ್ವಯಂಚಾಲಿತ ಗೇರ್ ಶಿಫ್ಟ್ ಬದಲಾವಣೆ ವ್ಯವಸ್ಥೆ ಹೊಂದಿರುತ್ತದೆ. ಸಣ್ಣ ತಿರುವುಗಳು ಮತ್ತು ತೀಕ್ಷ್ಣ ತಿರುವು ರಸ್ತೆಗಳಲ್ಲಿ ಸುಲಲಿತವಾಗಿ ಚಲಿಸಲು ಅನುಕೂಲ ಆಗುವಂತೆ, ಉತ್ತಮ-ಆರಾಮದಾಯಕ ಚಾಲನೆ ವ್ಯವಸ್ಥೆ ಕಲ್ಪಿಸಲಾಗಿದೆ.

ಎಲೆಕ್ಟ್ರಾನಿಕ್ ನಿಯಂತ್ರಿತ ಸಸ್ಪೆನ್ಷನ್ ವ್ಯವಸ್ಥೆಯೊಂದಿಗೆ ಪ್ರಯಾಣಿಕರಿಗೆ ಸುಖಕರ ಪ್ರಯಾಣವನ್ನು ಒದಗಿಸಲಿರುತ್ತದೆ. ಎಲೆಕ್ಟ್ರಾನಿಕ್ ನಿಯಂತ್ರಿತ ಎಬಿಎಸ್ ಬ್ರೇಕ್ ವ್ಯವಸ್ಥೆ ಹೊಂದಿರುತ್ತದೆ. ಇಂಧನ ಕ್ಷಮತೆ-ಹೆಚ್ಚಿನ ಬಾಳಿಕೆಯನ್ನು ಹೊದಿರುತ್ತದೆ. ಬಸ್ಸಿನಲ್ಲಿ 3 ಟಿವಿಗಳಿವೆ. ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಬಸ್ಸಿನ ಬೆಲೆ 1.7 ಕೋಟಿ ರೂ.ಗಳು ಎಂದು ಸಂಸ್ಥೆ ತಿಳಿಸಿದೆ.

ನೂತನ ಬಸ್ ಮಾರ್ಗ: ಬೆಂಗಳೂರು-ಕ್ಯಾಲಿಕಟ್, ಬೆಂಗಳೂರು-ಚೆನ್ನೈ, ಬೆಂಗಳೂರು-ವಿಜಯವಾಡ ಹಾಗೂ ಬೆಂಗಳೂರು-ಶ್ರೀಹರಿಕೋಟ, ಮಂಗಳೂರು- ಬೆಂಗಳೂರು(ಮಣಿಪಾಲ), ಮಂಗಳೂರು-ಮುಂಬೈ, ಮಂಗಳೂರು-ಬೆಂಗಳೂರು, ವಿರಾಜಪೇಟೆ-ಬೆಂಗಳೂರು, ಮಡಿಕೇರಿ-ಬೆಂಗಳೂರು ಹಾಗೂ ಮೈಸೂರು ಬೆಂಗಳೂರು ಮಾರ್ಗದಲ್ಲಿ ನೂತನ ಐಷಾರಾಮಿ ಬಸ್ಸುಗಳು ಸಂಚರಿಸಲಿವೆ.

ಕೆಎಸ್ಸಾರ್ಟಿಸಿ ಅಧ್ಯಕ್ಷ, ಶಾಸಕ ಕೆ.ಗೋಪಾಲ ಪೂಜಾರಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಕುಂಟಿಯಾ, ಮುಖ್ಯ ಕಾರ್ಯದರ್ಶಿ ಡಾ.ಬಿ. ಬಸವರಾಜು, ಸಾರಿಗೆ ಇಲಾಖೆ ಕಾರ್ಯದರ್ಶಿ ಉಮಾಶಂಕರ್, ಬಿಎನ್‌ಎಸ್ ರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ನಾಲ್ಕು ವರ್ಷಗಳಲ್ಲಿ ಐರಾವತಿ ಕ್ಲಬ್ ಕ್ಲಾಸ್, ಐರಾವತ ಡೈಮಂಡ್ ಕ್ಲಾಸ್, ರಾಜಹಂಸ, ನೂತನ ನಗರ ಸಾರಿಗೆ ಸೇರಿ ಒಟ್ಟಾರೆ 2,921 ಹೊಸ ವಾಹನಗಳು ಸೇರ್ಪಡೆಗೊಳಿಸಲಾಗಿದೆ. ದೇಶದಲ್ಲೆ ಸಾರಿಗೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಹೊಸ ಆಯಾಮ ಸೃಷ್ಟಿಸಿದೆ.
-ಎಚ್.ಎಂ.ರೇವಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News