×
Ad

ಎಂಡೋಸಲ್ಫಾನ್ ಬಳಕೆಗೆ ಅನುಮತಿ ನೀಡಿದವರ ವಿರುದ್ಧ ಕ್ರಮ ಅಗತ್ಯ: ಕೆ.ಆರ್.ರಮೇಶ್‌ಕುಮಾರ್

Update: 2017-09-13 20:35 IST

ಬೆಂಗಳೂರು, ಸೆ. 13: ಭೋಪಾಲ್ ದುರಂತದಂತೆ ಮೂರ್ನಾಲ್ಕು ತಲೆಮಾರು ನರಳುವ ಸ್ಥಿತಿಗೆ ದೂಡಿದ ‘ಎಂಡೋಸಲ್ಫಾನ್’ ಉತ್ಪಾದಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅಲ್ಲದೆ, ಎಂಡೋಸಲ್ಫಾನ್ ಬಳಕೆಗೆ ಅನುಮತಿ ನೀಡಿದವರ ಮೇಲೆಯೂ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಪ್ರತಿಪಾದಿಸಿದ್ದಾರೆ.

 ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಾನಿಧ್ಯ ಸಂಸ್ಥೆ, ಟಿವಿ-9 ಸಹಯೋಗದಲ್ಲಿ ಎಂಡೋ ಪೀಡಿತರಿಗೆ ಕೌಶಲ್ಯ ತರಬೇತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಅವರು, ಎಂಡೋ ಪೀಡಿತರಿಗೆ ವಿಶೇಷ ಪ್ಯಾಕೇಜ್ ನೀಡುವ ಕಡತ ಹಣಕಾಸು ಇಲಾಖೆ ಮುಂದಿದ್ದು, ಶೀಘ್ರದಲ್ಲೆ ಪ್ಯಾಕೇಜ್ ನೀಡಲು ಕ್ರಮ ವಹಿಸಲಾಗುವುದು ಎಂದರು.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋ ಪೀಡಿತರಿಗೆ 3.5 ಕೋಟಿ ರೂ.ವೆಚ್ಚದಲಿ ವಸತಿ ಶಾಲೆ ಸಹಿತ ಕೌಶಲ್ಯ ತರಬೇತಿಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಶೀಘ್ರದಲ್ಲೆ ಆರಂಭಕ್ಕೆ ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕ್ರಮ ವಹಿಸಲಿದೆ ಎಂದು ಅವರು ತಿಳಿಸಿದರು.

ಎಂಡೋ ಪೀಡಿತರಿಗೆ ಪುನರ್ವಸತಿ, ವಿಶೇಷ ಪ್ಯಾಕೇಜ್ ಕಲ್ಪಿಸಲು ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೆ, ರಾಜ್ಯ ಸರಕಾರ ಈಗಾಗಲೇ ಪುನರ್ವಸತಿ ಕೇಂದ್ರ ಸ್ಥಾಪಿಸಿದ್ದು, ಹಾಸಿಗೆ ಹಿಡಿದ ಎಂಡೋ ಪೀಡಿತರಿಗೆ ವಿಶೇಷ ಪ್ಯಾಕೇಜ್ ನೀಡಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್, ದಕ್ಷಿಣ ಕನ್ನಡ ಸಾನಿಧ್ಯ ಸಂಸ್ಥೆಯ ವಸಂತ ಕುಮಾರ್ ಶೆಟ್ಟಿ, ಟಿವಿ-9 ಮುಖ್ಯಸ್ಥ ಮಹೇಂದ್ರ ಮಿಶ್ರ, ರವಿಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಎಂಡೋಸಲ್ಫಾನ್ ಪೀಡಿತರಿಗೆ ಪ್ಯಾಕೇಜ್ ನೀಡುವ ಕಡತ ಹಣಕಾಸು ಇಲಾಖೆ ಬಳಿ ಇರುವ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ತನ್ನ ಗಮನಕ್ಕೆ ತಂದಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಎಂಡೋ ಪೀಡಿತರಿಗೆ ಕೌಶಲ್ಯ ತರಬೇತಿ ನೀಡಲು ಅಗತ್ಯ ನೆರವು ನೀಡಲಾಗುವುದು’

-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News