ಮಹಾರಾಷ್ಟ್ರ ಮಾದರಿಯಲ್ಲೇ ‘ಮೌಢ್ಯ ಪ್ರತಿಬಂಧಕ ಕಾಯ್ದೆ’ ಜಾರಿ: ಸಚಿವ ಕಾಗೋಡು ತಿಮ್ಮಪ್ಪ
ಬೆಂಗಳೂರು, ಸೆ. 15: ಮೌಢ್ಯ, ಕಂದಾಚಾರ, ಅನಿಷ್ಟ ಆಚರಣೆಗಳಿಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಮಾದರಿಯಲ್ಲೇ ರಾಜ್ಯದಲ್ಲಿಯೂ ‘ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ’ಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮೌಢ್ಯಾಚರಣೆ ಪ್ರತಿಬಂಧಕ ಮಸೂದೆಯನ್ನು ಮಂಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.
ಮೌಢ್ಯ, ಕಂದಾಚಾರ, ಅನಿಷ್ಟ ಪದ್ಧತಿಗಳನ್ನು ಕಾನೂನಿನ ಮೂಲಕ ತಡೆಗಟ್ಟಲು ಸಾಧ್ಯವಿಲ್ಲ. ಆದರೆ, ಮೌಢ್ಯಾಚರಣೆಗಳ ವಿರುದ್ಧ ನಿರಂತರ ಜನಜಾಗೃತಿ ಅಗತ್ಯ ಎಂದ ಅವರು, ದೇವರಿಗೆ ಕುರಿ, ಕೋಳಿ ಕೊಯ್ಯುವುದು ಮೌಢ್ಯ. ಅದನ್ನು ನಿಲ್ಲಿಸಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದರು.
ಮೌಢ್ಯ, ಅನಿಷ್ಟ ಪದ್ಧತಿಗಳ ಆಚರಣೆ ನಿಲ್ಲಬೇಕಾದರೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮಾಜದಲ್ಲಿ ಯಾವುದೇ ರೀತಿಯ ಬದಲಾವಣೆ ಬರಬೇಕಾದರೆ ಅದಕ್ಕೆ ಹೋರಾಟ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಭ್ರಮೆ ಬೇಡ: ‘ಹೋರಾಟ ಜೈಲು-ಅನ್ಯಾಯ ಬಯಲು’ ಎಂಬ ಲೋಹಿಯಾರ ಚಿಂತನೆಗಳಲ್ಲಿ ನಂಬಿಕೆ ಇಟ್ಟಿದ್ದೇನೆ. ಹೋರಾಟದ ಮೂಲಕ ಬದಲಾವಣೆ ಸಾಧ್ಯವೇ ಹೊರತು ಶಾಸನದಿಂದ ಬದಲಾವಣೆ ಆಗುತ್ತದೆ ಎಂಬ ಭ್ರಮೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿ ಕರಾವಳಿ ಭಾಗದಲ್ಲಿ ಗೇಣಿ ರೈತರಲ್ಲಿನ ಜಾಗೃತಿಯ ಕಾರಣ ಅವರಿಗೆ ಭೂಮಿ ಹಕ್ಕು ಸಿಕ್ಕಿದೆ. ಆದರೆ, ಉಳಿದ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳ ತಿಳಿವಳಿಕೆ ಕೊರತೆ ಹಾಗೂ ಗೇಣಿ ರೈತರಲ್ಲಿ ಜಾಗೃತಿ ಇಲ್ಲ. ಹೀಗಾಗಿ ಅವರಿಗೆ ಭೂಮಿಯ ಹಕ್ಕು ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಇನಾಮ್’ ರದ್ದತಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹೀಗಾಗಿ ಈ ಕಾಯ್ದೆಗೆ ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ಅಂಗೀಕಾರಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು.
ಅರ್ಜಿ ಸಲ್ಲಿಸಲು ಕಾಲಾವಕಾಶ: ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು 94 ‘ಸಿ’ ಮತ್ತು 94 ‘ಸಿಸಿ’ ನಿಯಮಗಳ ಅಡಿಯಲ್ಲಿ ಅಕ್ರಮ-ಸಕ್ರಮಕ್ಕೆ 5ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆ ಪೈಕಿ ಶೇ.50ರಷ್ಟು ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದರು.
94 ‘ಸಿ’ ಅಡಿ ಒಟ್ಟು 5.40 ಲಕ್ಷ ಅರ್ಜಿಗಳು ಬಂದಿದ್ದು, 26 ಲಕ್ಷ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಅದೇ ರೀತಿ 94 ‘ಸಿಸಿ’ ಅಡಿಯಲ್ಲಿ 1.67ಲಕ್ಷ ಅರ್ಜಿಗಳ ಪೈಕಿ 49 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದ ಅವರು, ಉಳಿದ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡಲು ಸೂಚಿಸಲಾಗಿದೆ. ಅಲ್ಲದೆ, ಅಕ್ರಮ-ಸಕ್ರಮ ಯೋಜನೆಯಡಿ ಇನ್ನೂ ಅನೇಕ ಮಂದಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ವಿವರ ನೀಡಿದರು.
ಉಳುವವನಿಗೆ ಭೂ ಒಡೆತನ ನೀಡುವ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದಿದ್ದರೂ ಇನ್ನೂ ಹಲವು ಪ್ರದೇಶದಲ್ಲಿ ಗೇಣಿ ರೈತರಿಗೆ ಭೂಮಿಯ ಹಕ್ಕು ಸಿಕ್ಕಿಲ್ಲ. ಹೀಗಾಗಿ ಗೇಣಿ ರೈತರಿಗೆ ಭೂ ಒಡೆತನ ಕಲ್ಪಿಸುವ ದೃಷ್ಟಿಯಿಂದ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ