ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ
ಬೆಂಗಳೂರು, ಸೆ. 15: ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟದಿಂದ ವಿಶ್ವಕರ್ಮ ಜಯಂತ್ಯುತ್ಸವವನ್ನು ಸೆ.17 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಉಮೇಶ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ನಗರದ ನಗರ್ತಪೇಟೆಯಲ್ಲಿರುವ ಕಾಳಿಕಾಂಭ ಕಮಟೇಶ್ವರಿ ದೇವಸ್ಥಾನದಿಂದ ಪೂಜಾ ಕುಣಿತ, ನಾಸಿಕ್ ವಾದ್ಯ, ಪುರವಂತಿಕೆ, ಕರಡಿ ಮಜಲು, ಪಟದ ಕುಣಿತ, ಡೊಳ್ಳು ಕುಣಿತ, ಹಗಲು ವೇಷ, ಸಿದ್ಧಿ ಡಮಾಮಿ, ನೃತ್ಯ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳೊಂದಿಗೆ ರವೀಂದ್ರ ಕಲಾಕ್ಷೇತ್ರದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಮಂತ್ರಿ ಅನಂತ್‌ಕುಮಾರ್, ಸಚಿವ ರೋಷನ್‌ಬೇಗ್, ಉಮಾಶ್ರೀ, ಆಂಜನೇಯ, ಎಚ್.ಎಂ.ರೇವಣ್ಣ, ಮೇಯರ್ ಜಿ.ಪದ್ಮಾವತಿ, ಜ್ಞಾನಪೀಠ ಪುರಸ್ಕೃತ, ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಶಿವ ಸುಜ್ಞಾನಮೂರ್ತಿ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.