×
Ad

ಸೆ.17 ರಂದು ಕ್ರೈಸ್ತ ಸಮುದಾಯದ ಸಮಾವೇಶ

Update: 2017-09-15 18:37 IST

ಬೆಂಗಳೂರು, ಸೆ.15: ಕರ್ನಾಟಕ ಕೈಸ್ತ್ರರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆ.17 ರಂದು ನಗರದ ಸಂತ ಜೋಸೆಫ್ ಇಂಡಿಯನ್ ಪ್ರೌಢಶಾಲೆ ಆವರಣದಲ್ಲಿ ಕ್ರೈಸ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ, ರಾಜ್ಯ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲು ಮುಂದಾಗಿದೆ. ಆದರೆ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಕ್ರೈಸ್ತ ಸಮುದಾಯಕ್ಕೆ ಪ್ರತಿ ಹಂತದಲ್ಲೂ ಅನ್ಯಾಯ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವ ಬಜೆಟ್‌ನಲ್ಲಿ ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 41 ಲಕ್ಷ ಕ್ರೈಸ್ತ ಜನಸಂಖ್ಯೆಯಿದೆ. ಆದರೆ, 2011 ರ ವರದಿ ಅನ್ವಯ 10.80 ಲಕ್ಷ ಜನರಿದ್ದಾರೆ ಎಂದು ಹೇಳಲಾಗಿದೆ. ಅಲ್ಪಸಂಖ್ಯಾತರು ಜನಸಂಖ್ಯೆಯಲ್ಲಿ ಕಡಿಮೆಯಿದ್ದಾರೆ ಎಂದು ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ. ಅಲ್ಲದೆ, ಕ್ರೈಸ್ತ ಸಮುದಾಯವನ್ನು ಪ್ರವರ್ಗ-3 ಬಿಗೆ ಸೇರಿಸಲಾಗಿದೆ. ಇದರಿಂದಾಗಿ ಸರಕಾರಿ ಉದ್ಯೋಗ ಹಾಗೂ ಮೀಸಲಾತಿಯಿಂದಲೂ ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ ಎಂದು ದೂರಿದರು.

ಕ್ರೈಸ್ತ ಸಮುದಾಯದ ಸ್ಥಿತಿಗತಿ ಮತ್ತು ಜನಸಂಖ್ಯೆಯನ್ನು ಪರಿಶೀಲಿಸಲು ಸರಕಾರ ಆಯೋಗವನ್ನು ರಚಿಸಬೇಕು. ವರದಿ ಸಲ್ಲಿಸಿದ ನಂತರ ಸಮುದಾಯವನ್ನು ಒಬಿಸಿ ಅಥವಾ ಇತರೆ ಯಾವುದೇ ಒಂದು ವರ್ಗಕ್ಕೆ ಸೇರಿಸಿ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳ ಕುರಿತು ಈ ಸಮಾವೇಶದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ತನ್ವೀರ್‌ ಸೇಠ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ಸಿ.ಕುಂಟಿಯಾ, ಆರ್ಟ್ ಬಿಷಪ್ ಡಾ.ಬರ್ನಾಡ್ ಮೊರಾಸ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News