ಹೊಸ ತಾಲೂಕುಗಳ ರಚನೆಗೆ ಕ್ರಮ: ಕಾಗೋಡು ತಿಮ್ಮಪ್ಪ
ಬೆಂಗಳೂರು, ಸೆ. 15: ಹೋಬಳಿ ಕೇಂದ್ರಗಳನ್ನು ಒಡೆಯದೆ ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆಗೆ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ವರದಿಗಳನ್ನು ಆಧರಿಸಿ ಘೋಷಿಸಿರುವ 49 ತಾಲೂಕುಗಳ ಪೈಕಿ 9 ತಾಲೂಕುಗಳ ಸಮಸ್ಯೆ ಇದೆ. ಗಡಿ ಗುರುತಿಸುವ ಸಂಬಂಧ ವರದಿ ಕೋರಿದ್ದು, ವರದಿ ಬಂದ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸ್ತುತ ಇರುವ ಮೂಲ ಸೌಲಭ್ಯದಲ್ಲೆ ಹೊಸ ತಾಲೂಕುಗಳ ಕಾರ್ಯನಿರ್ವಹಣೆ ನಡೆಯಲಿದ್ದು, ಮುಂಬರುವ ದಿನಗಳಲ್ಲಿ ಗ್ರಾಮ ವಿಕಾಸ ಯೋಜನೆ ಹಾಗೂ ಅಗತ್ಯ ಅನುದಾನ ಒದಗಿಸಲಾಗುವುದು. ಹೊಸ ತಾಲೂಕುಗಳ ಬಗ್ಗೆ ಜನವರಿ ವೇಳೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅನುದಾನಕ್ಕೆ ಮನವಿ: ಮಳೆ ಕೊರತೆಯಿಂದ 14 ಸಾವಿರ ಕೋಟಿ ರೂ.ಗಳಷ್ಟು ಮೊತ್ತದ ತೆಂಗು-ಅಡಿಕೆ ಬೆಳೆ ನಷ್ಟ ಉಂಟಾಗಿದ್ದು, ಕನಿಷ್ಠ 4,500 ಕೋಟಿ ರೂ. ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಕೇಂದ್ರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳೆ ನಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಕನಿಷ್ಠ 2 ಸಾವಿರ ಕೋಟಿ ರೂ.ಅಗತ್ಯ. ಕೇಂದ್ರ ಸ್ಪಂದಿಸದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡಲು ರಾಜ್ಯ ಸರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದರು.