ಪರಿಯಾರ್ ಕನಸು ನನಸು ಮಾಡಲು ಅಗತ್ಯ ಕ್ರಮ: ರಾಮಲಿಂಗಾರೆಡ್ಡಿ
ಬೆಂಗಳೂರು, ಸೆ.15: ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವ ಮೂಲಕ ದ್ರಾವಿಡ ಸಂಸ್ಕೃತಿ ಚಿಂತಕ, ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ದಸಂಸ(ಸಮತಾವಾದ) ವತಿಯಿಂದ ನಗರದ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಪೆರಿಯಾರ್ ರಾಮಸ್ವಾಮಿರವರ 138ನೆ ಜನ್ಮ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಬೇರು ಬಿಟ್ಟಿರುವ ವೌಢ್ಯಾಚರಣೆಯ ನಿರ್ಮೂಲನೆಗೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಪೆರಿಯಾರ್‌ರವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಮೌಢ್ಯಾಚರಣೆಗಳ ವಿರುದ್ಧ ನಿರಂತರವಾಗಿ ಶ್ರಮಿಸಿದ ಮಹಾನ್ ಚೇತನ ಪೆರಿಯಾರ್ ರಾಮಸ್ವಾಮಿ ನಮ್ಮ ರಾಜ್ಯದಲ್ಲಿ ಜನಿಸಿದ್ದರು ಎಂಬುದು ಹೆಮ್ಮೆಯ ವಿಷಯವಾಗಿದೆ. ತಮಿಳುನಾಡಿನಲ್ಲಿ ಮೌಢ್ಯಾಚರಣೆಯ ವಿರುದ್ಧ ಅವರು ಕೈಗೊಂಡ ಕಾರ್ಯಗಳು ಕ್ರಾಂತಿಯನ್ನೇ ಉಂಟು ಮಾಡಿದವು ಎಂದು ಅವರು ಅಭಿಮಾನಪಟ್ಟರು.
ಹಿರಿಯ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಪೆರಿಯಾರ್ ರಾಮಸ್ವಾಮಿ ತಮ್ಮ ಜೀವನದುದ್ದಕ್ಕೂ ಸಮ ಸಮಾಜದ ನಿರ್ಮಾಣಕ್ಕೆ, ಜನತೆಯಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದರು. ಅವರ ಆದರ್ಶಗಳು ಪ್ರಸ್ತುತ ದಿನಗಳಲ್ಲಿ ತೀರ ಅಗತ್ಯವಿದೆ ಎಂದು ತಿಳಿಸಿದರು.
ದಸಂಸ ಅಧ್ಯಕ್ಷ ಎಚ್.ಮಾರಪ್ಪ ಮಾತನಾಡಿ, ವಿಚಾರವಾದಿ ಪೆರಿಯಾರ್ ದ್ರಾವಿಡ ಚಿಂತನೆಗಳನ್ನು ಆಧುನಿಕ ಜಗತ್ತಿಗೆ ತಿಳಿಯ ಪಡಿಸಿದ ಪ್ರಮುಖ ನಾಯಕರು. ಅವರ ಹೋರಾಟಗಳಿಂದ ದಕ್ಷಿಣ ಭಾರತದ ಜನತೆಯಲ್ಲಿ ಪ್ರಾದೇಶಿಕ ಭಾಷೆಗಳ ಮೇಲಿನ ಅಭಿಮಾನ ಹೆಚ್ಚಲು ಕಾರಣವಾಯಿತು. ದ್ರಾವಿಡ ಸಮುದಾಯ ಅವರ ಚಿಂತನೆಗಳ ಬೆಳಕಿನಲ್ಲಿ ಮುನ್ನಡೆಯಬೇಕೆಂದು ಆಶಿಸಿದರು.
ಸಮಾರಂಭದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಹಿರಿಯ ಕಾಂಗ್ರೆಸ್ ಮುಖಂಡ ಉದಯ್ ಶಂಕರ್, ದಲಿತ ಮುಖಂಡರಾದ ಕೆ.ತಮ್ಮಯ್ಯ, ಎಚ್.ವಿಶ್ವನಾಥ್ ಸೇರಿ ಹಲವು ಪ್ರಮುಖರು ಹಾಜರಿದ್ದರು.