ರುಂಡ, ಗುಪ್ತಾಂಗ ಕತ್ತರಿಸಿ ಕೊಲೆ ಗೈದ ಪ್ರಕರಣ ಭೇದಿಸಿದ ಪೊಲೀಸ್ ಶ್ವಾನ ಜಿಮ್ಮಿ
ಬೆಂಗಳೂರು, ಸೆ. 15: ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ರುಂಡ ಮತ್ತು ಗುಪ್ತಾಂಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದ ಗಂಭೀರ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸ್ ಶ್ವಾನ ಜಿಮ್ಮಿ ಪತ್ತೆಹಚ್ಚಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಇಲೆಕ್ಟ್ರಾನಿಕ್ ಸಿಟಿಯ ದೊಡ್ಡತೋಗೂರಿನ ನೈಸ್ ರಸ್ತೆಯ ಬಳಿಯ ಹುಲ್ಲಿನ ಪೊದೆಯೊಂದರ ಬಳಿ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ಕೆಸೋಡಿಯಾ ಬಿರಾಂಚಿ ಮಾಂಝಿ (28) ಎಂಬಾತನನ್ನು ಕೊಲೆಗೈದು ಆತನ ರುಂಡ ತೆಗೆದುಕೊಂಡಿದ್ದ ಆರೋಪಿಗಳನ್ನು ಪೊಲೀಸ್ ಶ್ವಾನ ಜಿಮ್ಮಿ ಸಹಾಯದಿಂದ ಪತ್ತೆಹಚ್ಚುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಅನೈತಿಕ ಸಂಬಂಧ ಬೆಳೆಸಿ ಸಹೋದರಿಯನ್ನು ಗರ್ಭಿಣಿ ಮಾಡಿದ್ದ ಕಾರಣ ಇಬ್ಬರು ಸಹೋದರರು ಹಾಗೂ ಅವರ ಭಾವ ಸೇರಿ ಒರಿಸ್ಸಾದ ಕೆಸೋಡಿಯಾ ಬಿರಾಂಚಿ ಮಾಂಝಿ(28)ನನ್ನು ಕೊಲೆಗೈದು ರುಂಡ ಕತ್ತರಿಸಿ ದೇಹಬಿಟ್ಟು ಹೋಗಿರುವ ಪ್ರಕರಣ ನಗರದಲ್ಲಿ ನಡೆದಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಒರಿಸ್ಸಾದ ಮಯೂರ್ ಬೋಂಚ್ ಜಿಲ್ಲೆಯ ನೋಹಾಮಣಿಯಾ ಮಧು ಜೆರಾಯ್ (21) ಹಾಗೂ ಆತನ ಸೋದರ ಗಾಂಧಿಜೆರಾಯ್ (19) ಬಂಧಿಸಲಾಗಿದೆ. ಇನ್ನು ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಕಾಶಿರಾಂ(30)ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಹೇಳಿದರು.