ಕೊರಿಯಾ ಓಪನ್: ಸಿಂಧು ಸೆಮಿಗೆ

Update: 2017-09-15 18:36 GMT

ಸಿಯೋಲ್, ಸೆ.15: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮ ಸೋತು ಕೂಟದಿಂದ ನಿರ್ಗಮಿಸಿದ್ದಾರೆ. ಸಿಂಧು ಅವರು ಶುಕ್ರವಾರ ನಡೆದ ಮಹಿಳೆಯರ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಮಿನಾಸ್ಟು ಮಿಟಾನಿ ವಿರುದ್ಧ 21-19, 16-21, 21-10 ಅಂತರದಲ್ಲಿ ಜಯ ಗಳಿಸಿದರು. ಸಿಂಧು 63 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದರು. ಐದನೆ ಶ್ರೇಯಾಂಕದ ಸಿಂಧು ಅವರು ಸೆಮಿಫೈನಲ್‌ನಲ್ಲಿ ಸಂಗ್ ಜಿ ಹ್ಯೂನ್ ಅಥವಾ ಚೀನಾದ ಹಿ ಬಿಂಗ್ಜಿಯಾವೊರನ್ನು ಎದುರಿಸಲಿದ್ದಾರೆ.

  ಕಳೆದ ಐದು ತಿಂಗಳ ಹಿಂದೆ ಇಂಡಿಯಾ ಸೂಪರ್ ಸಿರೀಸ್‌ನಲ್ಲಿ ಸಮೀರ್ ವರ್ಮ ಅವರು ಕೊರಿಯಾದ ಸನ್ ವಾನ್‌ರನ್ನು ಪ್ರಥಮ ಸುತ್ತಿನಲ್ಲಿ ಮಣಿಸಿದ್ದರು. ಆದರೆ ಇಂದು ನಡೆದ ಪುರುಷರ ಕ್ವಾರ್ಟರ್‌ಫೈನಲ್‌ನಲ್ಲಿ ಸಮೀರ್ ಅವರು ಸನ್ ವಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ.

 ಬೆಳಗ್ಗೆ ನಡೆದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಕೊರಿಯಾದ ಸನ್ ವಾನ್ ಅವರು ಸಮೀರ್ ವರ್ಮ ವಿರುದ್ಧ 20-22, 21-10, 21-13 ಅಂತರದಲ್ಲಿ ಜಯ ಗಳಿಸಿದರು. ಒಂದು ಗಂಟೆ ಮತ್ತು 9 ನಿಮಿಷಗಳ ತನಕ ಇವರ ನಡುವೆ ಸೆಣಸಾಟ ನಡೆಯಿತು. ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಅವರ ವಿರುದ್ಧ ಜಪಾನ್‌ನ ತಾಕೇಶಿ ಕಮುರಾ ಮತ್ತು ಕೆಯ್ಗಿ ಸೊನೊಡೊ ಅವರು 21-14, 17-21 ಮತ್ತು 21-15 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News