×
Ad

ಆರೋಗ್ಯ ಕ್ಷೇತ್ರ ಸುಧಾರಣೆಯಲ್ಲಿ ಸಾಮಾನ್ಯ ಜನರ ಹಿತವಿರಲಿ: ಸಿಎಂ ಸಿದ್ದರಾಮಯ್ಯ

Update: 2017-09-16 18:26 IST

ಬೆಂಗಳೂರು, ಸೆ.16: ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಾಮಾನ್ಯ ಜನರನ್ನು ಗಮನದಲ್ಲಿರಿಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್-ಕರ್ನಾಟಕ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆರೋಗ್ಯ ಸೇವೆಯಲ್ಲಿ ನೈತಿಕತೆ ಮತ್ತು ಆಡಳಿತ’ ವಿಚಾರ ಸಂಕಿರಣ ಮತ್ತು ‘ಫೆಡರೇಷನ್ ಆಫ್ ಹೆಲ್ತ್‌ಕೇರ್ ಅಸೋಸಿಯೇಶನ್ಸ್ ಆಫ್ ಕರ್ನಾಟಕ’ವನ್ನು (ಎಫ್‌ಎಚ್‌ಎ-ಕೆ) ನೂತನ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಆಸ್ಪತ್ರೆಗಳು ಒಕ್ಕೂಟ ಮಾಡಿಕೊಂಡು ‘ಆರೋಗ್ಯ ಸೇವೆಯಲ್ಲಿ ನೈತಿಕತೆ ಮತ್ತು ಆಡಳಿತ ಸುಧಾರಣೆ’ ಕುರಿತು ಚರ್ಚೆ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಚರ್ಚೆಯ ಒಟ್ಟು ಸಾರಾಂಶವು ಸಮಾಜ ಮುಖಿಯಾಗಿರಲಿ. ಕಟ್ಟಕಡೆಯ ವ್ಯಕ್ತಿಯ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ಇರಲಿ ಎಂದು ಆಶಿಸಿದರು.

ಹಾಗೆ ನೋಡಿದರೆ ಸರಕಾರಿ ವೈದ್ಯಕೀಯ ಸಂಸ್ಥೆಗಳಿಗಿಂತ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಕ್ಷೇತ್ರದಲ್ಲಿ ಜಾರಿಗೆ ತರುವ ಸುಧಾರಣೆಗಳಲ್ಲಿ ಇಲ್ಲಿನ ಸಾಮಾನ್ಯ ಜನತೆಯ ಹಿತ ಅಡಗಿರಲಿ, ಮಾನವೀಯ ಮೌಲ್ಯಗಳು ಅಡಕವಾಗಿರಲಿ ಎಂದು ಹೇಳಿದರು.

ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಹೊಂದಿರುವ ದೇಶ ಮಾತ್ರವೇ ಸರ್ವತೋಮುಖವಾಗಿ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯದ ಜನತೆಗೆ ಉತ್ತಮ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಉತ್ತಮ ಮೌಲ್ಯಗಳನ್ನು ಇಟ್ಟು ಕೆಲಸ ಮಾಡುವ ಯಾವುದೇ ಸಂಸ್ಥೆಗಳಿಗೆ ಸರಕಾರದ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಉತ್ತರ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದೆ. ನಮ್ಮಲ್ಲಿ ಉತ್ತಮ ವೈದ್ಯರಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅನುದಾನವು ಸಿಗುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ಉತ್ತಮ ಆಡಳಿತ ನಿರ್ವಹಣೆ ಇಲ್ಲದೆ ಸಮಸ್ಯೆಗಳ ಗೂಡಾಗಿ ಪರಿಣಮಿಸಿದೆ ಎಂದು ವಿಷಾದಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತಮ್ಮ ವೈದ್ಯ ವೃತ್ತಿಯ ಜೊತೆಗೆ ಆಡಳಿತ ನಿರ್ವಹಣೆಗೂ ಹೆಚ್ಚಿನ ಗಮನ ಕೊಡಬೇಕು. ಜನತೆಗೆ ಉತ್ತಮ ಸೇವೆ ಕೊಡಬೇಕೆಂದು ನಿಸ್ವಾರ್ಥತೆ, ಪ್ರಾಮಾಣಿಕತೆ ಇದ್ದರೆ ಸರಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಮಿಗಿಲಿಲ್ಲದಂತೆ ಉತ್ತಮ ಸೇವೆ ಕೊಡಲು ಸಾಧ್ಯವಾಗುತ್ತದೆ ಎಂದ ಅವರು, ನಗರದ ಜಯದೇವ ಹೃದಯಾಲಯ ಆಸ್ಪತ್ರೆಯು ಉತ್ತಮ ಆಡಳಿತ ವ್ಯವಸ್ಥೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯಲ್ಲಿ ಉಳಿದ ಸರಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ಆಡಳಿತ ವ್ಯವಸ್ಥೆ ಜಾರಿಗೆ ಬಂದು ರೋಗಿಗಳು ಸರಕಾರಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಫೆಡರೇಶನ್ ಆಫ್ ಹೆಲ್ತ್‌ಕೇರ್ ಅಸೋಸಿಯೇಶನ್ಸ್-ಕರ್ನಾಟಕದ ಪ್ರಧಾನ ಸಂಚಾಲಕ ನಾಗೇಂದ್ರ ಸ್ವಾಮಿ, ರಾಷ್ಟ್ರಿಯ ಆರೋಗ್ಯ ಸಮ್ಮೇಳನದ ಸಂಚಾಲಕ ಡಾ.ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News