×
Ad

ನನ್ನ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇದೆಯೇ: ಸಚಿವ ಕೆ.ಜೆ.ಜಾರ್ಜ್

Update: 2017-09-16 18:29 IST

ಬೆಂಗಳೂರು, ಸೆ. 16: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪದೇ ಪದೇ ತನ್ನ ರಾಜೀನಾಮೆ ಕೇಳುತ್ತಿದ್ದಾರೆ. ಅವರು ಇನ್ನೂ ಐವತ್ತು ಬಾರಿ ನನ್ನ ರಾಜೀನಾಮೆ ಕೇಳಿದರೂ ತಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ನನ್ನ ರಾಜೀನಾಮೆ ಕೇಳುವ ಕನಿಷ್ಠ ನೈತಿಕತೆಯೂ ಇಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಕ್ಕೆ ಬಂದು ಹೋದ ಕಾರಣಕ್ಕೆ ಇಲ್ಲಿನ ಮುಖಂಡರು ನಿದ್ದೆಯಿಂದ ಎದ್ದು ಸುಖಾ ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ. ತಾನು ನಿರ್ದೋಷಿ. ಆದರೂ, ಬಿಜೆಪಿ ತನ್ನ ವೈಯಕ್ತಿಕ ರಾಜಕೀಯಕ್ಕಾಗಿ ರಾಜೀನಾಮೆಗೆ ಆಗ್ರಹಿಸುತ್ತಿದೆ ಎಂದ ಅವರು, ಸಿಬಿಐ ತನ್ನ ಮೇಲೆ ಜಾರ್ಜ್‌ ಶೀಟ್ ದಾಖಲಿಸಲಿ, ಆಗಬೇಕಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.

ಡಿ-ನೋಟಿಫಿಕೇಷನ್, ಭ್ರಷ್ಟಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೆಳಗ್ಗೆ- ಸಂಜೆ ನ್ಯಾಯಾಲಯಕ್ಕೆ ಹೋಗಿ ಬರುತ್ತಿರುವ ಯಡಿಯೂರಪ್ಪ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಿರುವಾಗ ನನ್ನ ರಾಜೀನಾಮೆ ಕೇಳುವ ನೈತಿಕತೆ ಅವರಿಗಿದೆಯೇ ಎಂದು ಜಾರ್ಜ್ ಖಾರವಾಗಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News