×
Ad

ರೇವಣ್ಣ ಈ ಹಿಂದೆಯೇ ಮಂತ್ರಿಯಾಗಬೇಕಿತ್ತು: ಸಚಿವ ರೋಶನ್ ಬೇಗ್

Update: 2017-09-16 18:33 IST

ಬೆಂಗಳೂರು, ಸೆ.16: ನೂತನವಾಗಿ ಸಾರಿಗೆ ಸಚಿವರಾಗಿರುವ ಎಚ್.ಎಂ.ರೇವಣ್ಣ ಅವರನ್ನು ಈ ಹಿಂದೆಯೇ ಮಂತ್ರಿ ಮಾಡಬೇಕಿತ್ತು ಎಂದು ನಗರಾಭಿವೃದ್ಧಿ ಸಚಿವ ಆರ್.ರೋಶನ್ ಬೇಗ್ ಅಭಿಪ್ರಾಯಪಟ್ಟರು.

ಶನಿವಾರ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೇವಣ್ಣ ಅವರು ಸಚಿವರಾಗುವಲ್ಲಿ ತಡವಾಗಿದೆ. ಅವರು ನಮ್ಮಾಂದಿಗೆ ಮೊದಲೇ ಸಚಿವ ಸಂಪುಟಕ್ಕೆ ಸೇರಬೇಕಿತ್ತು ಎಂದು ನುಡಿದರು.

ರಾಜ್ಯದಲ್ಲಿ ಹಿಂದುಳಿದ ನಾಯಕರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ, ಯಾರಾದರೂ ನಾಯಕರಿದ್ದಾರೆಂದರೆ ಅದು ಎಚ್.ಎಂ.ರೇವಣ್ಣ ಮಾತ್ರ. ಅವರ ಹೋರಾಟಗಳಿಂದಲೇ ಇಂದು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದ ಅವರು, ರಿಯಲ್ ಎಸ್ಟೇಟ್ ಉದ್ಯಮಿಗಳು ನೇರವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಜಾತಿಗಳೆಲ್ಲಾ ಒಗ್ಗೂಡಿದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ. ಇಲ್ಲದಿದ್ದಲ್ಲಿ, ಯಾವುದೇ ಪ್ರಗತಿ ನಡೆಯುವುದಿಲ್ಲ. ರಾಜ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಹಿಂದ ವರ್ಗಗಳಿಗೆ ಹೆಚ್ಚು ಸ್ಥಾನಮಾನ ನೀಡಿದೆ. ಈ ಯೋಜನೆಗಳು ಜನಪರವಾಗಿವೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಯೋಜನೆಗಳನ್ನು ಬಡಜನರಿಗೆ ಮುಟ್ಟಿಸಲು ಸಮುದಾಯದ ಮುಖಂಡರು ಮುಂದಾಗಬೇಕು. ಹಿಂದುಳಿದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್, ಬಡವರಿಗೆ ಜಮೀನು ಸೇರಿ ಇನ್ನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸಣ್ಣ ಜನಾಂಗಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸರಕಾರ ಮುಂದಾಗಿದೆ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಯಾರು ಪಕ್ಷಕ್ಕಾಗಿ ನೈತಿಕತೆಯಿಂದ ದುಡಿದರೂ ಅವರಿಗೆ ಸೂಕ್ತ ಸ್ಥಾನಮಾನ ಸಿಗುವುದರಲ್ಲಿ ತಡ ಆಗುತ್ತದೆ. ಆದರೆ, ರೇವಣ್ಣ ಅವರು ಸಚಿವರಾಗಿರುವುದು ಎಲ್ಲರಿಗೂ ಸಂತಸ ತಂದಿದೆ. ಅವರು ಹಿಂದುಳಿದ ಜನಾಂಗದ ಪ್ರಗತಿಗೆ ಶ್ರಮಿಸಲಿ ಎಂದರು.

ಒಕ್ಕೂಟದ ಅಧ್ಯಕ್ಷ ಡಾ.ಬಿ.ಕೆ.ರವಿ ಮಾತನಾಡಿ, ರಾಜ್ಯದ ಅರವತ್ತಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳ ಸಂಘಟನೆಗಳು ಒಗ್ಗೂಡಿ ಈ ಒಕ್ಕೂಟ ರಚನೆ ಮಾಡಲಾಗಿದೆ. ಹೆಚ್‌ಎಂ ರೇವಣ್ಣ ಅವರನ್ನು ಸಚಿವರಾಗಿ ಮಾಡಬೇಕೆನ್ನುವುದು ಹಿಂದುಳಿದ ಜನಾಂಗದ ಬೇಡಿಕೆಯಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾರಿಗೆ ಸಚಿವ ಸ್ಥಾನ ನೀಡಿರುವುದು ಸಂತಸ ತಂದಿದೆ ಎಂದರು.

ಸಮಾರಂಭದಲ್ಲಿ ಡಾ.ಎ.ಲೋಕೇಶ್ ಅವರ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಎಂ.ನಾಗರಾಜ್, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ವಸುಂಧರಾ ಭೂಪತಿ, ದಲಿತ ಕವಿ ಸಿದ್ದಲಿಂಗಯ್ಯ, ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಮಹಾಲಿಂಗಪ್ಪ ಲಾತೂರ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News