×
Ad

ಸಾಮಾಜಿಕ ಜಾಲತಾಣ ಸದ್ಬಳಕೆಗೆ ಕೆ.ಸಿ.ವೇಣುಗೋಪಾಲ್ ಸೂಚನೆ

Update: 2017-09-16 18:38 IST

ಬೆಂಗಳೂರು, ಸೆ.16: ಬಿಜೆಪಿ ಹಾಗೂ ಜೆಡಿಎಸ್ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಹಾಗೂ ಟ್ವಿಟರ್‌ಗಳ ಮೂಲಕ ಜನಸಂಪರ್ಕವನ್ನು ಸಾಧಿಸುತ್ತಿವೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಹಿಂದಕ್ಕೆ ಬೀಳಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದಾರೆ.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಇದು ಚುನಾವಣಾ ವರ್ಷವಾಗಿರುವುದರಿಂದ ಪ್ರತಿಯೊಬ್ಬರೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಸಾಮಾನ್ಯರು ಎದುರಿಸಿರುವ ಸಮಸ್ಯೆಗಳಿಗೆ ಬಿಬಿಎಂಪಿ ಸದಸ್ಯರು ಸ್ಪಂದಿಸಿ, ಅವರ ಕುಂದು ಕೊರತೆಗಳನ್ನು ಪರಿಹರಿಸಲು ಆದ್ಯತೆ ವಹಿಸಬೇಕು. ಕೇವಲ ಸಭೆ, ಸಮಾರಂಭಗಳಿಗಷ್ಟೇ ನೀವು ಸೀಮಿತವಾಗಿರಬಾರದು ಎಂದು ಎಚ್ಚರಿಕೆ ನೀಡಿದರು.

ಮಳೆಯ ಅವಾಂತರವು ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಜನರನ್ನು ನೇರವಾಗಿ ತಲುಪುವುದು ನೀವೆ. ಆದುದರಿಂದ, ತಮ್ಮ ತಮ್ಮ ವಾರ್ಡ್‌ಗಳಲ್ಲಿ ಜನ ಸಾಮಾನ್ಯರೊಂದಿಗೆ ಬೆರೆತು, ಸ್ಥಳೀಯವಾದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೆಕು ಎಂದು  ಹೇಳಿದರು.

ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಯುವ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷಕ್ಕೆ ಕರೆ ತನ್ನಿ, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ, ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಕಳೆದ ಬಾರಿಗಿಂತ ಈ ಬಾರಿ ಬೆಂಗಳೂರಿನಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ನಮ್ಮ ಮುಂದಿದೆ ಎಂದರು.

ಕಾಂಗ್ರೆಸ್ ನಾಯಕರು ಏಕೆ ಮಾಧ್ಯಮಗಳ ಮುಂದೆ ಹೆಚ್ಚಾಗಿ ಸ್ಪಂದಿಸುತ್ತಿಲ್ಲ. ಮಾಧ್ಯಮಗಳಿಂದ ದೂರು ಉಳಿದಿರಲು ಕಾರಣವೇನು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಪಾತ್ರ ಪ್ರಮುಖವಾದದ್ದು. ಆದುದರಿಂದ, ಮೈಮರೆಯದೆ ಎಚ್ಚರಿಕೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು, ಈ ಸಂಬಂಧ ಸಾರ್ವಜನಿಕರಿಂದ ಯಾವ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ, ಕ್ಯಾಂಟೀನ್ ಕುರಿತು ಏನಾದರೂ ಸಮಸ್ಯೆಗಳಿವೆಯೆ ಎಂದು ಪ್ರಶ್ನಿಸಿದ ವೇಣುಗೋಪಾಲ್, ಬಡವರು, ಕೂಲಿ ಕಾರ್ಮಿಕರಿಗೆ ಸಹಕಾರಿಯಾಗುತ್ತಿರುವ ಈ ಕ್ಯಾಂಟೀನ್‌ಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಎಂದು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News