×
Ad

ಮಕ್ಕಳಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಲು ಆಗ್ರಹ

Update: 2017-09-16 18:46 IST

ಬೆಂಗಳೂರು, ಸೆ.16: ಮಹಿಳಾ ಮತ್ತು ಮಕ್ಕಳ ಸಚಿವಾಲಯವನ್ನು ಪ್ರತ್ಯೇಕ ಮಾಡಿ ಮಕ್ಕಳಿಗಾಗಿಯೇ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು ಎಂದು ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ್ ವಿ.ಜಾಗೀರ್‌ದಾರ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಹಕ್ಕುಗಳಿಗಿಂತ ಮಕ್ಕಳ ಹಕ್ಕುಗಳು ತೀರಾ ಭಿನ್ನವಾಗಿದೆ. 2012ರಲ್ಲಿ ಸಂಸತ್‌ನಲ್ಲಿ ಅನುಮೋದನೆಗೊಂಡ ಪೋಸ್ಕೊ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕಾನೂನು ಕುರಿತಂತೆ ಜನರಲ್ಲಿ ಮತ್ತು ಪೋಷಕರಲ್ಲಿ ಜಾಹೀರಾತಿನ ಮೂಲಕ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಯೋಗೇಶ್ ಮಾಸ್ಟರ್ ಮಾತನಾಡಿ, ಮಕ್ಕಳು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಪೋಷಕರು, ಶಿಕ್ಷಕರು, ಸ್ನೇಹಿತರಿಂದಲೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅಲ್ಲದೆ, ಇಂದಿನ ಸಮಾಜದಲ್ಲಿ ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ತಪ್ಪು ಕಲ್ಪನೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಮುದ್ದಿಸುವ ನೆಪದಲ್ಲಿಯೇ ಬಹುತೇಕ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ಪೋಷಕರು ಹೊರಗಡೆ ಬಹಿರಂಗ ಪಡಿಸಲು ಇಷ್ಟಪಡುತ್ತಿಲ್ಲ. ಆದರೆ, ಇದು ಅತ್ಯಂತ ಅಪಾಯಕಾರಿಯಾಗಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಕಡ್ಡಾಯವಾಗಿ ಕೌನ್ಸೆಲಿಂಗ್ ಮಾಡಿಸಬೇಕು. ತಮ್ಮ ಸ್ವ ಪ್ರತಿಷ್ಠೆಗಾಗಿ ಮಕ್ಕಳನ್ನು ಬಲಿ ಕೊಡಬಾರದು ಎಂದರು.

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅದೇ ರೀತಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ಬೇಕಾದದ್ದನ್ನು ಕೊಡಿಸಬೇಕು ಅಥವಾ ಅದರಿಂದಾಗುವ ಅನಾಹುತದ ಕುರಿತು ಮನವರಿಕೆ ಮಾಡಿಕೊಡಬೇಕು. ಅಲ್ಲದೆ, ಸುತ್ತಮುತ್ತಲಿನ ಜನರು ಹೇಗೆ ವರ್ತಿಸುತ್ತಾರೆ, ನಾವು ಹೇಗೆ ನಡೆದುಕೊಳ್ಳಬೇಕು ಸೇರಿದಂತೆ ವಿವಿಧ ಆಯಾಮಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ಯೋಗೇಶ್ ಮಾಸ್ಟರ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News