×
Ad

ಸೆ.23 ರಂದು ರೈತ ಮುಕ್ತಿ ಯಾತ್ರಾ ಸಮಾರೋಪ

Update: 2017-09-16 18:48 IST

ಬೆಂಗಳೂರು, ಸೆ. 16: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ನೀಡಬೇಕು ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಮ್ಮಿಕೊಂಡಿರುವ ‘ದಕ್ಷಿಣ ಭಾರತ ರೈತ ಮುಕ್ತಿ ಯಾತ್ರಾ’ದ ಸಮಾರೋಪ ಸಮಾರಂಭವನ್ನು ಸೆ.23 ರಂದು ನಗರದ ಶಿಕ್ಷಕರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಜಿ.ಸಿ.ಬಯ್ಯಿರೆಡ್ಡಿ, ದೇಶದಾದ್ಯಂತ ರೈತ, ಕೃಷಿ ಕಾರ್ಮಿಕರು, ದಲಿತರು, ಗೇಣಿದಾರರು, ಆದಿವಾಸಿಗಳು ಹಾಗೂ ಇತರೆ ಗ್ರಾಮೀಣ ಕಸುಬುದಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಉತ್ಪಾದನಾ ವೆಚ್ಚದ ಜೊತೆಗೆ ಶೇ.50 ರಷ್ಟು ಲಾಭವನ್ನು ಸೇರಿಸಿ ಕಾನೂನಿನ ರಕ್ಷಣೆಯೊಂದಿಗೆ ಜಾರಿಗೆ ತರಬೇಕೆಂದು ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ‘ಕಿಸಾನ್ ಮುಕ್ತಿ ಯಾತ್ರಾ’ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸೆ.16 ರಂದು ತೆಲಂಗಾಣದಲ್ಲಿ ಯಾತ್ರೆ ಆರಂಭವಾಗಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳ ಮೂಲಕ ಸಂಚರಿಸಿ ಸೆ. 23ರ ಬೆಳಗ್ಗೆ ತುಮಕೂರಿಗೆ ಆಗಮಿಸಲಿದೆ. ಅಲ್ಲಿ ಬಹಿರಂಗ ಸಭೆ ನಡೆಸಿ ನಂತರ ಮಧ್ಯಾಹ್ನ 2ಕ್ಕೆ ಯಾತ್ರೆ ಬೆಂಗಳೂರಿಗೆ ಆಗಮಿಸಲಿದ್ದು, ನಗರದ ಶಿಕ್ಷಕರ ಸದನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಕೃಷಿಯಲ್ಲಿ ತೊಡಗಿಸಿಕೊಳ್ಳುವುದೇ ಲಾಭವಿಲ್ಲದ ಮತ್ತು ಘನತೆಯಿಲ್ಲದ ವೃತ್ತಿಯಲ್ಲಿ ತೊಡಗುವುದು ಎಂಬಂತಾಗಿದೆ. ನೂತನ ಆರ್ಥಿಕ ನೀತಿಗಳ ಪ್ರಭಾವದಿಂದ ಮೂರು ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ 30 ನಿಮಿಷಕ್ಕೊಬ್ಬ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವರ್ಷಕ್ಕೆ 2 ಲಕ್ಷ ಕೋಟಿ ರೂ.ಗಳಷ್ಟು ಆದಾಯವನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ. ದೇಶದ ಜನರ ಆರ್ಥಿಕತೆಗೆ ರೈತರ ಸಬ್ಸಿಡಿ ಬಿಟ್ಟುಕೊಡುತ್ತಿದ್ದಾರೆ. ಇಂತಹ ಬಿಕ್ಕಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ರೈತ ವಿರೋಧಿ ನೀತಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ದೇಶದ ವಿವಿಧ ಭಾಗಗಳಲ್ಲಿ ಯಾತ್ರೆ ನಡೆಯುತ್ತಿದ್ದು, ಅಂತಿಮವಾಗಿ ನ.20ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ರೈತ ಮುಕ್ತಿ ಸಂಸತ್ ಸಮಾವೇಶ ನಡೆಸುವ ಮೂಲಕ ಯಾತ್ರೆ ಕೊನೆಗೊಳ್ಳಲಿದೆ. ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ದೇಶದ ಎಲ್ಲಾ ಭಾಗಗಳ ರೈತರು ಸೇರಿ ಸಾಲದಿಂದ ವಿಮುಕ್ತಿ ಹಾಗೂ ಸ್ವಾಮಿನಾಥನ್ ಆಯೋಗ ವರದಿ ಅನುಷ್ಠಾನ ಮಾಡುವಂತೆ ಬೇಡಿಕೆಯನ್ನು ಸರಕಾರದ ಮುಂದಿಡಲಾಗುತ್ತದೆ ಎಂದರು.

ರೈತಮುಕ್ತಿ ಯಾತ್ರೆ ಕೇವಲ ರೈತರ ಹೋರಾಟವಾಗಬಾರದು. ಗ್ರಾಹಕರು ಸೇರಿದಂತೆ ಸಮಾಜದ ಎಲ್ಲಾ ಜನರು ಅತಿಹೆಚ್ಚು ಸಂಖ್ಯೆಯಲ್ಲಿ ಸೆ.23ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹಾಗೂ ನ.20ರ ರೈತ ಮುಕ್ತಿ ಸಂಸತ್‌ನಲ್ಲಿಯೂ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಸಮಾರೋಪ ಸಮಾವೇಶದಲ್ಲಿ ಕೆಪಿಆರ್‌ಎಸ್‌ನ ರಾಷ್ಟ್ರೀಯ ಮುಖಂಡ ಡಾ.ವಿಜುಕೃಷ್ಣನ್, ರೈತ ಸಂಘದ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಯೋಗೇಂದ್ರಯಾದವ್, ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಎಂ.ಶಶಿಧರ್, ವೆಂಕಟಾಚಲಯ್ಯ, ಚಂದ್ರಪ್ಪ ಹೊಸ್ಕೇರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News