×
Ad

ಡಿಸೇಲ್-ಪೆಟ್ರೋಲ್ ಬೆಲೆ ಇಳಿಸಲು ಸಿಪಿಐ ಆಗ್ರಹ

Update: 2017-09-16 18:50 IST

ಬೆಂಗಳೂರು, ಸೆ. 16: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನ ಬೆಲೆ ಇಳಿಕೆಯಾಗಿದ್ದರೂ, ಕೇಂದ್ರ ಸರಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಪ್ರತಿನಿತ್ಯ ಬದಲಾವಣೆ ಮಾಡುವ ಮೂಲಕ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಆರೋಪಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ತೈಲಗಳ ದರದಲ್ಲಿ ಏಕ್ಸೈಸ್ ಸುಂಕವು ಶೇ.380 ಮತ್ತು ಶೇ.100ರಷ್ಟು ಹೆಚ್ಚಳವಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೆ 1ಲಕ್ಷ ಕೋಟಿ ರೂ. ನೇರವಾಗಿ ಲಭ್ಯವಾಗಿದೆ. ಆದರೂ, ಬೆಲೆ ಇಳಿಕೆ ಮಾಡದೆ ಕೇಂದ್ರ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಲಾಗಿದೆ.

ಕೇಂದ್ರ ಸರಕಾರ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ನೋಟು ರದ್ದತಿ ಮೂಲಕ ಜನವಿರೋಧಿ ನೀತಿ ಅನುಸರಿಸಿತು. ಆರ್ಥಿಕ ಕೊರತೆಗಳನ್ನು ಮುಚ್ಚಿ ಹಾಕಲು, ಜನರ ಮೇಲೆ ಅಮಾನವೀಯ ಹೊರೆಯನ್ನು ಏರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ಏಕ್ಸೈಸ್ ಸುಂಕವನ್ನು ಕೂಡಲೆ ಕಡಿತಗೊಳಿಸಬೇಕು. ಇಲ್ಲವಾದರೆ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಸಿಪಿಐ ರಾಜ್ಯಾದ್ಯಂತ ಹೋರಾಟ ರೂಪಿಸಲಿದೆ ಎಂದು ಜಿಲ್ಲಾ ಮಂಡಳಿ ಕಾರ್ಯದರ್ಶಿ ಹರಿಗೋವಿಂದ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News