'ನಿರ್ಭೀತ ಮತ್ತು ಅಸಾಧಾರಣ ಪೈಲಟ್' ಹೆಗ್ಗಳಿಕೆಯ ಅರ್ಜನ್ ಸಿಂಗ್

Update: 2017-09-17 08:54 GMT

ಹೊಸದಿಲ್ಲಿ,ಸೆ.17: ವಾಯುಪಡೆಯ ಏಕೈಕ ಮಾರ್ಷಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಜನ್ ಸಿಂಗ್ ತನ್ನ ಅಸಾಧಾರಣ ಸೇವೆಯ ನೆನಪನ್ನು ಬಿಟ್ಟು ಹೋಗಿದ್ದಾರೆ. ನಿನ್ನೆ ಬೆಳಿಗ್ಗೆ ತೀವ್ರ ಅಸ್ವಸ್ಥಗೊಂಡು ಇಲ್ಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೈದ್ಯರ ಹರಸಾಹಸದ ಹೊರತಾಗಿಯೂ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

 1919,ಎ.15ರಂದು ಪಾಕಿಸ್ತಾನದ ಫೈಸಲಾಬಾದ್( ಆಗಿನ ಪಂಜಾಬಿನ ಲ್ಯಾಲಪುರ್)ನಲ್ಲಿ ಮಿಲಟರಿ ಇತಿಹಾಸದ ಕುಟುಂಬದಲ್ಲಿ ಜನಿಸಿದ್ದ ಅರ್ಜನ್ ಸಿಂಗ್ 1938ರಲ್ಲಿ ತನ್ನ 19ರ ಹರೆಯದಲ್ಲೇ ಆಗಿನ್ನೂ ಹೊಸದಾಗಿದ್ದ ಭಾರತೀಯ ವಾಯುಪಡೆ(ಐಎಎಫ್)ಯನ್ನು ಸೇರಿದ್ದರು. ಎರಡನೇ ಮಹಾಯುದ್ಧದಲ್ಲಿ ಬರ್ಮಾ ರಣರಂಗದಲ್ಲಿ ಅವರು ಅಪ್ರತಿಮ ಶೌರ್ಯವನ್ನು ಮೆರೆದಿದ್ದು, ಇದು ಅವರ ನೆನಪನ್ನು ಚಿರಸ್ಥಾಯಿಯಾಗಿಸಿದೆ. ತನ್ನ ಸಾಧನೆಗಾಗಿ ಆಗ್ನೇಯ ಏಷ್ಯಾದಲ್ಲಿನ ಮಿತ್ರರಾಷ್ಟ್ರಗಳ ಸುಪ್ರೀಂ ಕಮಾಂಡರ್‌ರಿಂದ ‘ಡಿಸ್ಟಿಂಗ್ವಿಷ್ಡ್ ಫ್ಲೈಯಿಂಗ್ ಕ್ರಾಸ್’ನ್ನು ಪಡೆದ ಮೊದಲ ಭಾರತೀಯ ಪೈಲಟ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಅವರನ್ನು ‘ನಿರ್ಭೀತ ಮತ್ತು ಅಸಾಧಾರಣ ಪೈಲಟ್’ ಎಂದು ಬಣ್ಣಿಸಲಾಗಿತ್ತು.

1950ರಲ್ಲಿ ಭಾರತವು ಗಣತಂತ್ರವಾಗಿ ಘೋಷಣೆಯಾದ ಬಳಿಕ ಅರ್ಜನ್ ಸಿಂಗ್ ಅವರು 1952,ಡಿಸೆಂಬರ್‌ವರೆಗೆ ಐಎಎಫ್‌ನ ಆಪರೇಷನಲ್ ಗ್ರೂಪ್‌ನ ಮುಖ್ಯಸ್ಥರಾಗಿದ್ದರು. ಬಳಿಕ 1955,ಡಿಸೆಂಬರ್‌ನಿಂದ 1959,ಎಪ್ರಿಲ್‌ವರೆಗಿನ ಅವಧಿಯಲ್ಲಿ ಮತ್ತೊಮ್ಮೆ ಆ ಹುದ್ದೆಯನ್ನು ನಿರ್ವಹಿಸಿದ್ದರು.

ಭಾರತಕ್ಕೆ ಸ್ವಾತಂತ್ರ ದೊರೆತ ಬಳಿಕ ಹಲವಾರು ಮಿಲಿಟರಿ ತರಬೇತಿಗಳನ್ನು ಪಡೆಯಲು ಅವರನ್ನು ಬ್ರಾಕ್ನೆಲ್‌ನ ರಾಯಲ್ ಏರ್‌ಫೋರ್ಸ್ ಸ್ಟಾಫ್ ಕಾಲೇಜ್ ಮತ್ತು ಲಂಡನ್ನಿನ ಇಂಪೀರಿಯಲ್ ಡಿಫೆನ್ಸ್ ಕಾಲೇಜ್‌ಗೆ ಕಳುಹಿಸಲಾಗಿತ್ತು.

1964,ಆಗಸ್ಟ್‌ನಲ್ಲಿ ಅರ್ಜನ್ ಸಿಂಗ್ ಅವರು ತನ್ನ 45ನೇ ವಯಸ್ಸಿನಲ್ಲಿ ಭಾರತೀಯ ವಾಯುಪಡೆಯ ಮೂರನೇ ಭಾರತೀಯ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. 1965ರ ಭಾರತ-ಪಾಕ್ ಯುದ್ಧದಲ್ಲಿ ಅವರು ಸಲ್ಲಿಸಿದ್ದ ಸೇವೆಗಾಗಿ ಅದೇ ವರ್ಷ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯು ಒಲಿದು ಬಂದಿತ್ತು.

1970ರಲ್ಲಿ ತನ್ನ 50ರ ಹರೆಯದಲ್ಲಿ ಐಎಎಫ್‌ನಿಂದ ನಿವೃತ್ತಿಯಾದ ಬಳಿಕ ಅವರು ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕೆಲವೇ ಗಣ್ಯರ ಸಾಲಿಗೆ ಸೇರಿದ್ದರು.

1971ರಲ್ಲಿ ಸ್ವಿಟ್ಝರ್‌ಲಂಡ್ ಮತ್ತು 1974ರಲ್ಲಿ ಕೆನ್ಯಾದಲ್ಲಿ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿದ್ದ ಅವರು, ವ್ಯಾಟಿಕನ್‌ನಲ್ಲಿಯೂ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಸ್ವದೇಶಕ್ಕೆ ಮರಳಿದ ಅವರನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳಿಸಲಾಗಿತ್ತು.

2002ರಲ್ಲಿ ಅರ್ಜನ್ ಸಿಂಗ್ ಅವರಿಗೆ ಐದು ಸ್ಟಾರ್‌ಗಳ ದರ್ಜೆಗೆ ಭಡ್ತಿ ನೀಡಲಾಗಿದ್ದು, ಈ ಗೌರವ ಪಡೆದ ಏಕೈಕ ಐಎಎಫ್ ಅಧಿಕಾರಿಯೆಂಬ ಹೆಗ್ಗಳಿಕೆ ಅವರದ್ದಾಗಿದೆ.

ಅರ್ಜನ್ ಸಿಂಗ್ ಗೌರವಾರ್ಥ ಕಳೆದ ವರ್ಷ ಪಶ್ಚಿಮ ಬಂಗಾಳದ ಪಾನಗಡದ ಐಎಎಫ್‌ನ ವಾಯುನೆಲೆಗೆ ಅವರ ಹೆಸರನ್ನಿರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News