ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟರಿಗೆ ಮೀಸಲು: ನಿಯಮಾವಳಿ ರೂಪಿಸಿ ಸರಕಾರದ ಅಧಿಸೂಚನೆ
ಬೆಂಗಳೂರು, ಸೆ. 17: ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ.ಗಳ ವರೆಗೆ ಮೀಸಲಾತಿ ಕಲ್ಪಿಸಲು ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಟೆಂಡರ್ ಆಹ್ವಾನಿಸಿದ ಸಂದರ್ಭದಲ್ಲಿ ಎರಡು ಬಾರಿ ಎಸ್ಸಿ-ಎಸ್ಟಿ ವರ್ಗದ ಗುತ್ತಿಗೆದಾರರಿಗೆ ಪಾಲ್ಗೊಳ್ಳದಿದ್ದರೆ ಅಂತಹ ಕಾಮಗಾರಿಗಳನ್ನು ಇತರೆ ಗುತ್ತಿಗೆದಾರರಿಗೆ ನೀಡಬಹುದು ಎಂದು ಸರಕಾರ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
10ವರ್ಷಗಳ ಕಾಲ ರಾಜ್ಯದಲ್ಲಿ ವಾಸವಿರುವ ಗುತ್ತಿಗೆದಾರರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ನಿಯಮಾವಳಿ ಅನ್ವಯ ಇನ್ನು ಮುಂದೆ ಸರಕಾರಿ ಕಾಮಗಾರಿಗಳಲ್ಲಿ 50ಲಕ್ಷ ರೂ.ಮೊತ್ತದ ವರೆಗಿನ ಟೆಂಡರ್‌ನಲ್ಲಿ ಎಸ್ಸಿ ಗುತ್ತಿಗೆದಾರರಿಗೆ ಶೇ.17.15 ಹಾಗೂ ಎಸ್ಟಿಗೆ ಶೇ.6.95 ರಷ್ಟು ಕಾಮಗಾರಿಗಳನ್ನು ಮೀಸಲಿಡಬೇಕು ಎಂದು ನಿರ್ದೇಶಿಸಲಾಗಿದೆ.
ನಾಲ್ಕಕ್ಕಿಂತ ಹೆಚ್ಚು ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸುವ ವೇಳೆ ಮೀಸಲಿಡಬೇಕಾದ ಕಾಮಗಾರಿ ಯಾವುದೇ ಎಂಬುದು ಮೊದಲು ನಿರ್ಧರಿಸಲು ಯಾರಿಗೂ ಅವಕಾಶ ಇಲ್ಲದಂತೆ ಹಂಚಿಕೆ ಪ್ರಕ್ರಿಯೆ ನಡೆಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.