ತನಿಖೆ ನಡೆಸಿ, ಕ್ರಮ ಕೈಗೊಳ್ಳಿ: ರಾಮಲಿಂಗಾರೆಡ್ಡಿ
ಬೆಂಗಳೂರು, ಸೆ.17: ಲಘು ವಾಹನದಲ್ಲಿ ಅಧಿಕ ಪ್ರಮಾಣದ ಸರಕು ಹಾಕಿರುವುದಾಗಿ ಚಾಲಕನಿಂದ ನಗದು ಪಡೆದು, ರಶೀದಿ ಕೊಡದ ಆರೋಪದ ಸಂಚಾರ ಪೊಲೀಸರೊಬ್ಬರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದನ್ನು ಗಮನಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಈ ಸಂಬಂಧ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ನಗರದ ಕೆಆರ್ ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ಮುಖ್ಯ ಪೇದೆಯೊಬ್ಬರು, ವಾಹನಯೊಂದರಲ್ಲಿ ಅಧಿಕ ಪ್ರಮಾಣದ ಸರಕು ಹಾಕಿಕೊಂಡಿರುವುದನ್ನು ಗಮನಿಸಿ 1,100 ರೂ.ದಂಡ ಹಾಕಿದರು. ಆದರೆ, ಯಾವುದೇ ರಶೀದಿ ನೀಡದೆ ಚಾಲಕನನ್ನು ಪೀಡಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗೃಹ ಸಚಿವರು ಗಮನಿಸಿದ್ದಾರೆ.
ಈ ಘಟನೆ ಸಂಬಂಧ ಸೂಕ್ತವಾಗಿ ತನಿಕೆ ನಡೆಸಿ, ತಪ್ಪುಕಂಡುಬಂದಲ್ಲಿ ಸಂಚಾರ ಪೊಲೀಸ್ ಮುಖ್ಯಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಸಂಚಾರ ಆಯುಕ್ತರಿಗೆ ಮೊಬೈಲ್ ಕರೆ ಮಾಡಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಅದೇ ರೀತಿ, ಯಾವ ಪೊಲೀಸರು ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸದೆ ಸಾರ್ವಜನಿಕರ ಜೊತೆಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಎಲ್ಲ ಪೊಲೀಸ್ ಅಧಿಕಾರಿಗಳಿಗೂ ಸೂಚಿಸುವಂತೆ ಪೊಲೀಸ್ ಆಯುಕ್ತರಿಗೆ ತರಾಟೆ ತೆಗೆದು ಕೊಂಡರು ಎಂದು ತಿಳಿದು ಬಂದಿದೆ.