ಸೆ.23ಕ್ಕೆ ಎಚ್.ಡಿ.ಕುಮಾರಸ್ವಾಮಿಗೆ ಶಸ್ತ್ರ ಚಿಕಿತ್ಸೆ

Update: 2017-09-18 14:19 GMT

ಬೆಂಗಳೂರು, ಸೆ. 18: ಹೃದಯ ಸಂಬಂಧಿ ಸಮಸ್ಯೆ ಹಿನ್ನೆಲೆಯಲ್ಲಿ ಸೆ.23ರಂದು ತಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೃದಯದ ‘ಟಿಷ್ಯೂ ವಾಲ್ವ್’ ಬದಲಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಹದಿನೈದು ದಿನ ವಿಶ್ರಾಂತಿ ಪಡೆದು ಬಳಿಕ ಎಂದಿನಂತೆ ಪಕ್ಷ ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳ ಹಿಂದೆ (2007) ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ನನ್ನ ಹೃದಯದ ವಾಲ್ವ್ ಬದಲಿಸಲಾಗಿತ್ತು. ಇದರ ಜೀವಿತಾವಧಿ ಕೇವಲ 10 ವರ್ಷ ಮಾತ್ರ. ಈಚೆಗೆ ಆ್ಯಂಜಿಯೋಗ್ರಾಂ ಮಾಡಿಸಿದಾಗಲೂ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದರು.

ಆದರೆ, ಇತ್ತೀಚೆಗೆ ಕೆಮ್ಮು ನನ್ನನ್ನು ಬಾಧಿಸುತ್ತಿದೆ. ಇದರಿಂದ ಹೃದಯದ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯ. ವೈದ್ಯರು ನನ್ನ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ಅಮೆರಿಕಾದ ತಜ್ಞ ವೆೈದ್ಯರೊಂದಿಗೆ ಸಂಪರ್ಕದಲ್ಲಿ ಇದ್ದು, ಸೆ.23ಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂದು ಹೇಳಿದರು.

ಅಧ್ಯಯನ ಪ್ರವಾಸಕ್ಕೆಂದು ಇಸ್ರೇಲ್‌ಗೆ ತೆರಳಿದ ಸಂದರ್ಭದಲ್ಲಿಯೂ ನನಗೆ ಅನಾರೋಗ್ಯವಿತ್ತು. ಹೀಗಾಗಿ ನಾನು ಅಲ್ಲಿ ಆಸ್ಪತ್ರೆಗೆ ದಾಖಲಾದ ವೇಳೆ ಅಲ್ಲಿನ ವೈದ್ಯರು ಹೃದಯ ಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದ್ದರು. ಆದರೆ, ಅದಕ್ಕೆ ತಾತ್ಕಾಲಿಕವಾಗಿ ಔಷಧಗಳನ್ನು ತೆಗೆದುಕೊಂಡು ಬಳಿಕ ಭಾರತಕ್ಕೆ ಹಿಂದಿರುಗಿದ್ದೆ.

ಇದೀಗ ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ತಜ್ಞರ ಸೂಚನೆ ಅನ್ವಯ ಸೆ.23ಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಹದಿನೈದು ದಿನಗಳವಿಶ್ರಾಂತಿಯ ಬಳಿಕ ತಾನು ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಿದ್ದೇನೆ ಎಂದು ಹೇಳಿದರು.

‘1996ರಲ್ಲಿ ನನ್ನ ಜತೆ ಲೋಕಸಭೆ ಸದಸ್ಯರಾಗಿದ್ದ ಅಲ್ಪಸಂಖ್ಯಾತರ ಸಮುದಾಯದ ಖಮರುಲ್ ಇಸ್ಲಾಮ್ ನಿಧನ ಕಾಂಗ್ರೆಸ್ ಪಕ್ಷಕಷ್ಟೇ ಅಲ್ಲ ರಾಜ್ಯಕ್ಕೂ ತುಂಬಾಲಾರದ ನಷ್ಟ. ಸಚಿವರಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದ ಅವರ ಅಗಲಿಕೆಯಿಂದ ಅಲ್ಪಸಂಖ್ಯಾತ ಸಮುದಾಯದ ಬದ್ಧತೆಯುಳ್ಳ ನಾಯಕನನ್ನು ಕಳೆದುಕೊಂಡಂತೆ ಆಗಿದೆ’

-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News