ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ರಾಮೇಶ್ವರಕ್ಕೆ ಹೊರಟ ಸಿಟ್ ತಂಡ
ಬೆಂಗಳೂರು, ಸೆ.18: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಟ್ ತನಿಖಾಧಿಕಾರಿಗಳ ತಂಡ, ಕಾನೂನು ಬಾಹಿರವಾಗಿ ಪಿಸ್ತೂಲ್ ತಯಾರಿಸುವಲ್ಲಿ ಸಕ್ರಿಯವಾಗಿರುವ ತಮಿಳುನಾಡಿನ ರಾಮೇಶ್ವರಕ್ಕೆ ಹೊರಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು ಕಾನೂನು ಬಾಹಿರವಾಗಿ ಸಮೀಪದ ಸ್ಥಳಗಳಿಂದಲೇ ಪಿಸ್ತೂಲು ಖರೀದಿ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿ ಸಿಟ್ ಅಧಿಕಾರಿಗಳ ತಂಡ ರಾಮೇಶ್ವರಕ್ಕೆ ತೆರಳಿ ತನಿಖೆ ನಡೆಸಲಿದೆ ಎನ್ನಲಾಗಿದೆ.
ಸೆ.5ರಂದು ಮಂಗಳವಾರ ರಾತ್ರಿ 7:55 ಸುಮಾರಿಗೆ ರಾಜರಾಜೇಶ್ವರ ನಗರದಲ್ಲಿ ಗೌರಿ ಲಂಕೇಶ್‌ರನ್ನು ಸ್ವಗೃಹ ಬಳಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಸಂಬಂಧ ಸ್ಥಳ ಹಾಗೂ ಗೌರಿ ಅವರ ದೇಹದಲ್ಲಿ ಸಿಕ್ಕ ಗುಂಡುಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳಿಗೆ ಹಲವು ಶಂಕೆ ವ್ಯಕ್ತವಾಗಿದೆ.
ಅಲ್ಲದೆ, ಸಿಕ್ಕಿರುವ ಗುಂಡುಗಳನ್ನಿಟ್ಟುಕೊಂಡು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈಗಾಗಲೇ ರಾಮೇಶ್ವರಕ್ಕೆ ಕೆಲ ಅಧಿಕಾರಿಗಳು ಹೋಗಿದ್ದಾರೆ. ಈ ಸಂಬಂಧ ತಮಿಳುನಾಡಿನ ಪೊಲೀಸರ ಸಹಾಯವನ್ನು ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.