ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಸೆ.18: ಹೈಕೋರ್ಟ್ ನೌಕರರ ವೇತನ ಪರಿಷ್ಕೃತ ಶ್ರೇಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಹೈಕೋರ್ಟ್ ನೌಕರರ ವೇತನ ಶ್ರೇಣಿ ಪರಿಷ್ಕರಣೆ ಮಾಡುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್ ನೌಕರರ ಕ್ಷೇಮಾಭಿವೃದ್ದಿ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆಗೆ ಹಾಜರಿದ್ದ ಅಡ್ವೋಕೇಟ್ ಜನರಲ್ ಮಧು ಸೂದನ್ ನಾಯಕ್, ವೇತನ ಪರಿಷ್ಕರಣೆ ಮಾಡಬೇಕೆಂಬ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಪುರಸ್ಕರಿಸಿ ಹೊರಡಿಸಿದ್ದ ತೀರ್ಪು ಮರು ಪರಿಶೀಲನೆಗೆ ಕೋರಿ ರಾಜ್ಯ ಸರಕಾರ ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಬೆಳಗ್ಗೆ ರದ್ದುಪಡಿಸಿದೆ. ಹಾಗೆಯೇ, ವೇತನ ಶ್ರೇಣಿ ಪರಿಷ್ಕರಿಸಲು ನಾಲ್ಕು ತಿಂಗಳ ಕಾಲ ರಾಜ್ಯ ಸರಕಾರಕ್ಕೆ ಗಡುವು ನೀಡಿದೆ. ಹೀಗಾಗಿ, ಈ ಅರ್ಜಿಯನ್ನು ಇತ್ಯರ್ಥಪಡಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ಇತ್ಯರ್ಥಪಡಿಸಿದರೆ ಸರಕಾರ ಯಾವಾಗ ಹಾಗೂ ಏನು ಕ್ರಮ ಜರುಗಿಸಲಿದೆ ಎಂಬುದು ತಿಳಿಯುವುದಿಲ್ಲ. ಹೀಗಾಗಿ, ಅರ್ಜಿ ವಿಚಾರಣೆ ಬಾಕಿ ಉಳಿಸಿಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ಪೀಠ, ನೌಕರರ ವೇತನ ಪರಿಷ್ಕರಣೆಗೆ ಸುಪ್ರೀಂ ಕೊರ್ಟ್ ನಾಲ್ಕು ತಿಂಗಳ ಕಾಲ ಗಡುವು ನೀಡಿದೆ. ಈಗ ಹೈಕೋರ್ಟ್ ಆ ಕುರಿತು ಮತ್ತೆ ನಿರ್ದೇಶನ ನೀಡುವ ಅವಶ್ಯಕತೆ ಉದ್ಭವಿಸುವುದಿಲ್ಲ. ಹೀಗಾಗಿ, ವೇತನ ಪರಿಷ್ಕರಣೆಗೆ ಸರಕಾರ ಏನು ಕ್ರಮ ಜರುಗಿಸಲಿದೆ ಎಂಬುದನ್ನು ಕಾದು ನೋಡೋಣ ಎಂದು ಅಭಿಪ್ರಾಯಪಟ್ಟು ಅರ್ಜಿ ವಿಚಾರಣೆ ಮುಂದೂಡಿತು.
ಹೈಕೋರ್ಟ್ ನೌಕರರ ವೇತನ ಪರಿಷ್ಕರಣೆ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ವಿಭಾಗೀಯ ಪೀಠ 2011ರ ಅ.12ರಂದು ಆದೇಶ ಮಾಡಿತ್ತು. ಈ ಆದೇಶ ಪಾಲಿಸಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈ ಬಿಡುವಂತೆ ಕೋರಿ ರಾಜ್ಯ ಸರಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಸರಕಾರದ ಅರ್ಜಿ ತಿರಸ್ಕರಿಸಿದ್ದ ವಿಭಾಗೀಯ ಪೀಠ, ಹೈಕೊರ್ಟ್ ನೌಕರರ ವೇತನ ಪರಿಷ್ಕರಣೆಗೆ ಹೊರಡಿಸಿದ ತೀರ್ಪು ಪಾಲಿಸಿ ವರದಿ ಸಲ್ಲಿಸುವಂತೆ 2017ರ ಜುಲೈ 14ರಂದು ಸರಕಾರಕ್ಕೆ ನಿರ್ದೇಶಿಸಿತ್ತು.