ಕೊನೆಗೂ ದುಷ್ಕರ್ಮಿಗಳು ಪರಾರಿಯಾಗಿದ್ದ ಬೈಕ್‌ನ ನೋಂದಣಿ ಸಂಖ್ಯೆ ಪತ್ತೆ
ಬೆಂಗಳೂರು, ಸೆ.19: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ, ದುಷ್ಕರ್ಮಿಗಳು ಕೊಲೆಗೈದ ಬಳಿಕ ಪರಾರಿಯಾಗಿದ್ದ ಬೈಕ್‌ನ ನೋಂದಣಿ ಸಂಖ್ಯೆಯನ್ನು ಸಿಟ್ ತನಿಖಾಧಿಕಾರಿಗಳು ಪತ್ತೆ ಮಾಡಿದ್ದು, ಬೆಂಗಳೂರು ಪೂರ್ವ ವಿಭಾಗದಲ್ಲಿ ಈ ಬೈಕ್‌ನ ಸಂಖ್ಯೆ ನೋಂದಣಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸೆ.5ರ ಮಂಗಳವಾರ ರಾತ್ರಿ 7:55 ಸುಮಾರಿಗೆ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಸ್ವಗೃಹದ ಎದುರು ದುಷ್ಕರ್ಮಿಗಳು ಗುಂಡಿಕ್ಕಿ ಪರಾರಿಯಾಗಿದ್ದರು. ಆದರೆ, ಮುಂದಿನ ಏಳನೆ ಮನೆಯ ಎರಡನೆ ಮಹಡಿ ಮುಂಭಾಗ ಹಾಕಲಾಗಿದ್ದ ಸಿಸಿಟಿವಿಯೊಂದರಲ್ಲಿ ದುಷ್ಕರ್ಮಿಗಳು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.
ಈ ದೃಶ್ಯಗಳು ಸ್ಪಷ್ಟವಾಗಿ ಇಲ್ಲದಿದ್ದರೂ, ದುಷ್ಕರ್ಮಿಗಳು ಕೆಂಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿರುವುದು ಹಾಗೂ ಬೈಕ್‌ನ ಮುಂಭಾಗ ‘ಕೆಎ-02’ ನೋಂದಣಿ ಸಂಖ್ಯೆ ಕಾಣುತ್ತಿದೆ. ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬೆಂಗಳೂರು ಪೂರ್ವ ವಿಭಾಗದಲ್ಲಿ ಈ ಬೈಕ್ ನೋಂದಣಿಯಾಗಿರುವುದು ತಿಳಿದು ಬಂದಿದೆ.
ಲಕ್ಷಾಂತರ ಬೈಕ್ ನೋಂದಣಿ: ಬೆಂಗಳೂರು ಪೂರ್ವ ವಿಭಾಗದಲ್ಲಿ ‘ಕೆಎ 02’ ಸಂಖ್ಯೆಯಲ್ಲಿ ಲಕ್ಷಾಂತರ ಬೈಕ್‌ಗಳು ನೋಂದಣಿಯಾಗಿವೆ. ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು, ಡಿಲರ್‌ಗಳು ಸಹಾಯದಿಂದ ಬೈಕ್ ಮಾಲಕನ ವಿಳಾಸಕ್ಕಾಗಿ ಈಗಾಗಲೇ ಶೋಧಕಾರ್ಯ ಆರಂಭವಾಗಿದೆ ಎನ್ನಲಾಗಿದೆ.
ಸಭೆ: ಮಂಗಳವಾರ ನಗರದ ಅರಮನೆ ರಸ್ತೆಯಲ್ಲಿರುವ ಸಿಐಟಿ ಪ್ರಧಾನ ಕಚೇರಿಯಲ್ಲಿ ಸಿಟ್ ಮುಖ್ಯಸ್ಥ ಬಿ.ಕೆ.ಸಿಂಗ್ ಅವರು ತನಿಖಾಧಿಕಾರಿಗಳೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ತನಿಖೆ ಸಂಬಂಧ ಮಾಹಿತಿ ಪಡೆದರು.
ಸಿಸಿಟಿವಿ ವೀಕ್ಷಣೆ: ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿರುವ ಗೌರಿ ಲಂಕೇಶ್ ಪತ್ರಿಕೆಯ ಪ್ರಧಾನ ಕಚೇರಿ ಸೇರಿದಂತೆ ನಗರದ ನಾನಾ ಕಡೆ 750ಕ್ಕೂ ಹೆಚ್ಚು ಸಿಸಿಟಿವಿಯ ಡಿವಿಆರ್ ವಶಕ್ಕೆ ಪಡೆದಿರುವ ಸಿಟ್ ತನಿಖಾಧಿಕಾರಿಗಳ ತಂಡ, ನೂರಕ್ಕೂ ಹೆಚ್ಚಿನ ಸಿಬ್ಬಂದಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ವೀಕ್ಷಿಸಿ ಪ್ರಕರಣ ಸಂಬಂಧ ಮಾಹಿತಿ ಶೇಖರಣೆ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ.
ಅಗ್ನಿಶ್ರೀಧರ್ ಕಚೇರಿಗೆ ಸಿಟ್ ಭೇಟಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಅಗ್ನಿ ಪತ್ರಿಕೆ ಕಚೇರಿಗೆ ಮಂಗಳವಾರ ಸಿಟ್ ತನಿಖಾಧಿಕಾರಿಗಳು ಭೇಟಿ ನೀಡಿದರು.
ಸಿಟ್‌ನ ಎಸಿಪಿ, ಇನ್ ಸ್ಪೆಕ್ಟರ್ ಸೇರಿ ನಾಲ್ವರು ತನಿಖಾಧಿಕಾರಿಗಳು ಭೇಟಿ ನೀಡಿ, ಅಗ್ನಿಶ್ರೀಧರ್ ಅವರೊಂದಿಗೆ 2ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ವಾರ ಪತ್ರಿಕೆಗಳಲ್ಲಿನ ಸುದ್ದಿ ಪ್ರಕಟ, ಗೌರಿ ಲಂಕೇಶ್ ಅವರ ಹೋರಾಟ ಸೇರಿದಂತೆ ಇನ್ನಿತರೆ ವಿಷಯಗಳ ಸಿಟ್ ಅಧಿಕಾರಿಗಳು ನನ್ನಿಂದ ಮಾಹಿತಿ ಪಡೆದರು. ಅಲ್ಲದೆ, ಹತ್ಯೆ ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲೂ ಸಿಟ್ ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ಅದಷ್ಟು ಬೇಗ ಹಂತಕರನ್ನು ಸೆರೆ ಹಿಡಿಯಬೇಕೆಂದು ಅಗ್ನಿ ಶ್ರೀಧರ್ ಪತ್ರಿಕೆಗೆ ತಿಳಿಸಿದರು.
ಸುಳ್ಳು ಸುದ್ದಿ: ಕನ್ನಡ ಸುದ್ದಿ ವಾಹಿನಿಯೊಂದು, ನಾನು ಪೊಲೀಸ್ ಠಾಣೆಗೆ ಹೋಗಿದ್ದೆ, ಪಿಸ್ತೂಲ್ ಮಾರಾಟ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಅಗ್ನಿಶ್ರೀಧರ್ ಅವರನ್ನು ಸಿಟ್ ತನಿಖಾಧಿಕಾರಿಗಳು ತೀವ್ರ ವಿಚಾರಣೆ ಗೊಳಪಡಿಸಿದರು, ಎಂದೆಲ್ಲಾ ಕತೆ ಕಟ್ಟಿ ಸುಳ್ಳು ಸುದ್ದಿ ಹಾಕುತ್ತಿದ್ದಾರೆ ಎಂದು ಅಗ್ನಿಶ್ರೀಧರ್ ಕಿಡಿಕಾರಿದರು.