×
Ad

ಖಮರುಲ್ ಇಸ್ಲಾಂ ಅಲ್ಪಸಂಖ್ಯಾತರ ಹಕ್ಕಿಗೆ ಜೀವನ ಮುಡಿಪಿಟ್ಟ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

Update: 2017-09-19 20:43 IST

ಕಲಬುರಗಿ, ಸೆ.19: ಮಾಜಿ ಸಚಿವ ಖಮರುಲ್ ಇಸ್ಲಾಂ ಅಲ್ಪಸಂಖ್ಯಾತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸಮುದಾಯದ ಹಕ್ಕುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಅಪರೂಪದ ರಾಜಕಾರಣಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ನಗರದ ಕೆಸಿಟಿ ಕಾಲೇಜು ಮೈದಾನದಲ್ಲಿ ಖಮರುಲ್ ಇಸ್ಲಾಂ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಸುಧೀರ್ಘ ಕಾಲದ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದ ಖಮರುಲ್ ಇಸ್ಲಾಂ ಉತ್ತರ ಕರ್ನಾಟಕ ಭಾಗದ ಜನಪ್ರಿಯ ನಾಯಕರಾಗಿದ್ದರು ಎಂದು ಬಣ್ಣಿಸಿದರು.

ಇತ್ತೀಚೆಗೆ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಅವರು, ರಾಷ್ಟ್ರಮಟ್ಟದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಬಯಸಿತ್ತು. ಅವರ ಅಗಲಿಕೆಯಿಂದ ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ತುಂಬಲಾರದ ನಷ್ಟವಾಗಿದೆ. ಅವರ ತತ್ವ ಸಿದ್ಧಾಂತ ಮಾರ್ಗವು ಯುವಕರಿಗೆ ದಾರಿದೀಪವಾಗಲಿ ಎಂದು ಅವರು ಆಶಿಸಿದರು.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಖಮರುಲ್ ಇಸ್ಲಾಂ ಅಗಲಿಕೆಯಿಂದ ಉತ್ತರ ಕರ್ನಾಟಕ ಬಡವಾಗಿದೆ. ತಮ್ಮ ರಾಜಕೀಯ ಜೀವನದಲ್ಲಿ ಬಡವರ ಅಭಿವೃದ್ಧಿ, ಅಲ್ಪಸಂಖ್ಯಾತರ ಏಳ್ಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದು ನುಡಿನಮನ ಸಲ್ಲಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಹಿರಿಯ ನಾಯಕ ಖಮರುಲ್ ಇಸ್ಲಾಂ ಕಾಂಗ್ರೆಸ್‌ಗಾಗಿ ಸೈನಿಕನಂತೆ ದುಡಿದಿದ್ದಾರೆ. ಅವರ ಅಗಲಿಕೆ ನಮ್ಮ ಪಕ್ಷಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ. ಆದರೂ ಅವರ ನಡೆದ ದಾರಿ ನಮಗೆ ಮಾದರಿಯಾಗಲಿದೆ ಎಂದು ಸ್ಮರಿಸಿದರು.

ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಚಿವರಾದ ಎಂ.ಬಿ.ಪಾಟೀಲ್, ಯು.ಟಿ.ಖಾದರ್, ರೋಶನ್ ಬೇಗ್, ತನ್ವೀರ್ ಸೇಠ್, ಪ್ರೀಯಾಂಕ ಖರ್ಗೆ, ಈಶ್ವರ ಖಂಡ್ರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಪಕ್ಷದ ಮುಖಂಡರು, ಅಭಿಮಾನಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News