ಭಾರತ ತಂಡದ ನಾಯಕನಾಗಿ ಅಮರ್‌ಜಿತ್ ಸಿಂಗ್ ಆಯ್ಕೆ

Update: 2017-09-19 18:45 GMT

ಪಣಜಿ, ಸೆ.19: ದೇಶದ ವಿವಿಧ ಆರು ನಗರಗಳಲ್ಲಿ ಮುಂದಿನ ತಿಂಗಳು ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ಗೆ ಭಾರತ ತಂಡದ ನಾಯಕನಾಗಿ ಮಿಡ್‌ಫೀಲ್ಡರ್ ಅಮರ್‌ಜಿತ್ ಸಿಂಗ್ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಕೋಚ್ ಲೂಯಿಸ್ ನೊರ್ಟನ್ ಡಿ ಮೊಟೊಸ್ ತಂಡದ 27 ಆಟಗಾರರಿಗೆ ನಾಲ್ಕು ಹೆಸರನ್ನು ನೀಡಿದ್ದು ಒಂದು ಪೇಪರ್‌ನಲ್ಲಿ ತಮ್ಮ ಆಯ್ಕೆಯ ನಾಯಕನ ಹೆಸರನ್ನು ಬರೆಯುವಂತೆ ಸಲಹೆ ನೀಡಿದ್ದರು.

   ಹೊಸದಿಲ್ಲಿಯಲ್ಲಿ ಅಕ್ಟೋಬರ್ 6 ರಿಂದ ಆರಂಭವಾಗಲಿರುವ ಫಿಫಾ ಅಂಡರ್-17 ವಿಶ್ವಕಪ್‌ಗೆ ಭಾರತದ ಆಟಗಾರರು ಅಮರ್‌ಜಿತ್ ಸಿಂಗ್‌ರನ್ನು ನಾಯಕನಾಗಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಜಿತೇಂದ್ರ ಸಿಂಗ್ ಉಪ ನಾಯಕನಾಗಿ ಆಯ್ಕೆಯಾದರು. ಕಳೆದ ವರ್ಷ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ್ದ ಸುರೇಶ್ ಸಿಂಗ್ ಮತಗಳಿಕೆಯಲ್ಲಿ ಮೂರನೆ ಸ್ಥಾನ ಪಡೆದರು.

ಮಣಿಪುರದಲ್ಲಿ ಹುಟ್ಟಿ, ಬೆಳೆದಿರುವ ಅಮರ್‌ಜಿತ್ ತನ್ನ ಚಿಕ್ಕಪ್ಪನಿಂದ ಫುಟ್ಬಾಲ್‌ಗೆ ಪರಿಚಯಿಸಲ್ಪಟ್ಟಿದ್ದರು. ಅಮರ್‌ಜಿತ್‌ರ ಚಿಕ್ಕಪ್ಪ ಚಂಡಿಗಢ ಫುಟ್ಬಾಲ್ ಅಕಾಡಮಿ (ಸಿಎಫ್‌ಎ) ಸ್ಥಾಪಿಸಿದ್ದಾರೆ.

ಅಂಡರ್-17 ವಿಶ್ವಕಪ್‌ಗೆ ಭಾರತವನ್ನು ಪ್ರತಿನಿಧಿಸುವ ಆಟಗಾರರಿಗಾಗಿ ಆಯ್ಕೆಗಾರರು ಹುಡುಕಾಟ ನಡೆಸುತ್ತಿದ್ದಾಗ ಅಮರ್‌ಜಿತ್‌ರನ್ನು ಟ್ರಯಲ್ಸ್‌ಗೆ ಆಹ್ವಾನಿಸಲಾಗಿತ್ತು. ಈ ವೇಳೆ ಅವರು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದರು.

 ಆರಂಭದಲ್ಲಿ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದ ಅಮರ್‌ಜಿತ್ ತನ್ನ ಮಿಡ್‌ಫೀಲ್ಡ್ ಸಾಮರ್ಥ್ಯದ ಮೂಲಕ ಜರ್ಮನಿಯ ಕೋಚ್ ನಿಕೊಲೈ ಆಡಮ್‌ರ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News