ಮಹಿಳಾ ಹಾಕಿ ತಂಡಕ್ಕೆ 4-3 ಜಯ

Update: 2017-09-19 18:53 GMT

ಅಂಟ್ವರ್ಪ್, ಸೆ.19: ಭಾರತದ ಮಹಿಳಾ ಹಾಕಿ ತಂಡ ಬೆಲ್ಜಿಯಂನ ಜೂನಿಯರ್ ಪುರುಷರ ತಂಡದ ವಿರುದ್ಧ 4-3 ಗೆಲುವಿನೊಂದಿಗೆ ಯುರೋಪ್ ಪ್ರವಾಸವನ್ನು ಕೊನೆಗೊಳಿಸಿದೆ.

ಗುರ್ಜಿತ್ ಕೌರ್(7ನೆ, 8ನೆ ನಿಮಿಷ) ಮತ್ತು ನಾಯಕಿ ರಾಣಿ ರಾಂಪಾಲ್ (13ನೆ , 33ನೆ) ತಲಾ 2 ಗೋಲು ದಾಖಲಿಸಿ ಭಾರತದ ಗೆಲುವಿಗೆ ನೆರವಾದರು. ಭಾರತದ ಆಟಗಾರ್ತಿಯರು ಆಕ್ರಮಣಕಾರಿಯಾಗಿ ಆಟ ಆರಂಭಿಸಿದರು. 7ನೆ ನಿಮಿಷದಲ್ಲಿ ಡ್ರಾಗ್-ಫ್ಲಿಕರ್ ಗುರ್ಜಿತ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮೊದಲ ಗೋಲು ದಾಖಲಿಸಿದರು. 11ನೆ ನಿಮಿಷದಲ್ಲಿ ಇನ್ನೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗುರ್ಜಿತ್ ಕೌರ್ ಗೋಲು ಜಮೆ ಮಾಡಿದರು. ಇದರೊಂದಿಗೆ ಭಾರತದ ವನಿತೆಯರ ತಂಡ ಆರಂಭದಲ್ಲೇ 2-0 ಮುನ್ನಡೆ ಸಾಧಿಸಿತು.

13ನೆ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್ ಫೀಲ್ಡ್ ಗೋಲು ಜಮೆ ಮಾಡಿದರು. ಇದರೊಂದಿಗೆ ಭಾರತ ಮೊದಲಾರ್ಧದಲ್ಲಿ 3-0 ಮೇಲುಗೈ ಸಾಧಿಸಿತ್ತು. ದ್ವಿತೀಯಾರ್ಧದ ಆರಂಭದಲ್ಲಿ ಬೆಲ್ಜಿ ಯಂನ ಪುರುಷರು ಖಾತೆ ತೆರೆಯಲು ಯತ್ನಿಸಿದರು.

 ಆದರೆ ಭಾರತದ ಮಹಿಳಾ ತಂಡದ ಗೋಲು ಕೀಪರ್ ರಜನಿ ಎತಿಮಾರ್ಪು ಗೋಲು ನಿರಾಕರಿಸಿದರು. 30 ನಿಮಿಷಗಳ ಆಟ ಕೊನೆಗೊಂಡಾಗ ಭಾರತ 3-0 ಅಂತದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. 33ನೆ ನಿಮಿಷದಲ್ಲಿ ನಾಯಕಿ ರಾಣಿ ರಾಂಪಾಲ್ ಇನ್ನೊಂದು ಗೋಲು ಜಮೆ ಮಾಡಿದರು. ಭಾರತ ಇದರೊಂದಿಗೆ 4-0 ಮುನ್ನಡೆ ಸಾಧಿಸಿತು. 38ನೆ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬೆಲ್ಜಿಯಂನ ಥಿಬೌಲ್ಟ್ ನೆವೆನ್ ಗೋಲು ಎಗರಿಸಿದರು. 42ನೆ ನಿಮಿಷದಲ್ಲಿ ವಿಲಿಯಂ ವ್ಯಾನ್ ಡೆಸೆಲ್ ಗೋಲು ಕಬಳಿಸಿದರು.

48ನೆ ನಿಮಿಷದಲ್ಲಿ ಬೆಲ್ಜಿಯಂನ ಮಥಾಯಿಸ್ ರೆಲಿಕ್ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿದರು. ಆಟ ಕೊನೆಗೊಳ್ಳಲು 10 ನಿಮಿಷ ಬಾಕಿ ಇದ್ದಾಗ ಬೆಲ್ಜಿಯಂನ್ನು ಒತ್ತಡಕ್ಕೆ ಸಿಲುಕಿಸಿದ ಭಾರತದ ಆಟಗಾರ್ತಿಯರು ಅಂತಿಮವಾಗಿ 4-3 ಅಂತರದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News