ರೊಹಿಂಗ್ಯನ್ನರಿಗೆ ಸೌದಿ ದೊರೆಯಿಂದ 15 ದಶಲಕ್ಷ ಡಾಲರ್ ನೆರವು

Update: 2017-09-20 11:13 GMT

ಜಿದ್ದ, ಸೆ. 20: ಸೌದಿ ಅರೇಬಿಯದ ದೊರೆ ಸಲ್ಮಾನ್  ಮ್ಯಾನ್ಮಾರ್‍ನಿಂದ ಪಲಾಯನ ಗೈಯುತ್ತಿರುವ ರೊಹಿಂಗ್ಯನ್ನರಿಗೆ  15 ದಶಲಕ್ಷ ಡಾಲರ್ ನೆರವನ್ನು  ಘೋಷಿಸಿದ್ದಾರೆ. ಈ ವಿಷಯವನ್ನು  ಕಿಂಗ್ ಸಲ್ಮಾನ್ ರಿಲೀಫ್  ಸೆಂಟರ್ ಪ್ರಧಾನ ಸೂಪರ್‍ವೈಸರ್ ಹಾಗೂ ರಾಯಲ್‍ಕೋರ್ಟ್ ಸಲಹೆಗಾರ ಆದ ಡಾ. ಅಬ್ದುಲ್ಲಾ ಬಿನ್ ಅಬ್ದುಲ್‍ಅಝೀಝ್ ಅಲ್‍ ರಬೀಯಾ  ಬಹಿರಂಗಪಡಿಸಿದ್ದಾರೆ. ವಾಷಿಂಗ್ಟನ್‍ನ ಅಮೆರಿಕನ್ ಪ್ರತಿನಿಧಿ ಸಭಾ ಕೇಂದ್ರದಲ್ಲಿ ಅರಬ್ ಅಮೆರಿಕನ್ ಸಂಬಂಧಗಳ  ರಾಷ್ಟ್ರೀಯ ಸಮಿತಿ ಸದಸ್ಯರು ಮತ್ತು ಅಮೆರಿಕ, ಜಿಸಿಸಿ ದೇಶಗಳ ಪರಸ್ಪರ ಸಹಕಾರ ಸಮಿತಿಯನ್ನು ಭೇಟಿ ಮಾಡಿದ ನಂತರ ಅಲ್‍ರಬೀ ಸೌದಿ  ಪ್ರೆಸ್ ಏಜೆನ್ಸಿಗೆ ನೀಡಿದ ಹೇಳಿಕೆಯಲ್ಲಿ ಹದಿನೈದುಲಕ್ಷ ಅಮೆರಿಕನ್ ಡಾಲರ್ ರೊಹಿಂಗ್ಯನ್ನರಿಗೆ ನೀಡಲು ದೊರೆ ಸಲ್ಮಾನ್ ಆದೇಶಿಸಿದ್ದಾರೆಂದು  ತಿಳಿಸಿದರು.

ಮ್ಯಾನ್ಮಾರ್ ಸೇನೆಯ ದೌರ್ಜನ್ಯಗಳಿಂದ ತತ್ತರಿಸಿರುವ ರೊಹಿಂಗ್ಯನ್ ಜನತೆಗೆ ಈ ಮೊದಲು ನೀಡಿದ್ದ ಸಹಾಯ ಹಸ್ತದ ಮುಂದುವರಿದ ಭಾಗ ಇದೆಂದು ಅಲ್ ರಬೀ ತಿಳಿಸಿದರು. ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯನ್ನರ  ಪರಿಸ್ಥಿತಿ ಹಾಗೂ ಅವರಿಗೆ ಬೇಕಾದ ತುರ್ತು ಅಗತ್ಯಗಳನ್ನು ಮನಗಂಡು  ಪರಿಹಾರ ಕೇಂದ್ರದಿಂದ ಬಾಂಗ್ಲಾದೇಶಕ್ಕೆ  ಸಹಾಯ ಒದಗಿಸುವ ತಂಡಗಳನ್ನು ಕಳುಹಿಸಲಾಗಿದೆ ಎಂದು ರಬೀ ಹೇಳಿದರು.

ನಿರಾಶ್ರಿತರಿಗೆ ಮಾರೂಖ್, ಯು.ಮಿಂಬಿಯ, ಕ್ಯೂಕ್ತಾವ್, ಬುಕ್ತಾವ್  ಮುಂತಾದ ಸ್ಥಳಗಳಲ್ಲಿ ಮೊದಲ ಹಂತದ  ಪುನರ್ವಸತಿಯ ಯೋಜನೆಯನ್ನು  ವರ್ಲ್ರ್ ಆರ್ಗನೈಝೇಶನ್ ಆಫ್ ಮೈಗ್ರೇಶನ್‍ನ ಸಹಕಾರದಿಂದ ಜಾರಿಗೊಳಿಸಲಾಗಿದೆ. ಮಲೇಶ್ಯಕ್ಕೆ ಪಲಾಯನ ಮಾಡಿರುವ ರೊಹಿಂಗ್ಯನ್ ಮುಸ್ಲಿಮರ ನೆರವಿಗೆ ಕೌಲಾಲಂಪುರದ ಸೌದಿ ದೂತವಾಸದೊಂದಿಗೆ ಸಹಕರಿಸಿ ಯೋಜನೆಗಳನ್ನು ರೂಪಿಸಲಾಗಿದೆ. ದೇಶ ತೊರೆದವರನ್ನು ಪುನಃ ದೇಶಕ್ಕೆ ಸೇರಿಸಿಕೊಳ್ಳುವಂತೆ  ಮ್ಯಾನ್ಮಾರ್ ಸರಕಾರದ ಮೇಲೆ ಒತ್ತಡ ಹಾಕಬೇಕೆಂದು ವಿಶ್ವಸಂಸ್ಥೆಮತ್ತು ಜಾಗತಿಕ ದೇಶಗಳೊಂದಿಗೆ  ಡಾ.ರಬೀಹ್ ಆಗ್ರಹಿಸಿದರು. ಮಾತ್ರವಲ್ಲ ಅವರು,  ಅಂತಾರಾಷ್ಟ್ರೀಯ ಸಂಘಟನೆಗಳು ತಮ್ಮ ಮಾನವೀಯ ಮತ್ತು ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News