ಕೆರೆಯಲ್ಲಿ ಮುಳುಗಲಿರುವ ಸಿದ್ದರಾಮಯ್ಯ: ಸಿ.ಟಿ.ರವಿ
ಬೆಂಗಳೂರು, ಸೆ. 20: ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಸ್ಪರ್ಧೆ ಇದ್ದರೂ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನೀರು ಕುಡಿದಿದ್ದರೂ, ಈ ಬಾರಿ ಆ ಕೆರೆಯಲ್ಲೇ ಸಿದ್ದರಾಮಯ್ಯ ಮುಳುಗಲಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರಿಗೆ ಕಾಪು ಸಿದ್ದಲಿಂಗಸ್ವಾಮಿ ಏಳು ಕೆರೆ ನೀರು ಕುಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ತಮ್ಮ ಕ್ಷೇತ್ರದಲ್ಲೇ ಗೆಲ್ಲುವುದು ಅನುಮಾನ ಎಂದು ಹೇಳಿದರು.
ಸಿಎಂ ಪ್ರತಿನಿಧಿಸುತ್ತಿರುವ ‘ವರುಣಾ, ಕನಕಪುರ, ಹೊಳೆನರಸೀಪುರ’ ಕ್ಷೇತ್ರದಲ್ಲೂ ಸ್ಪರ್ಧಿಸಲು ನಾನು ಸಿದ್ಧ. ಪಕ್ಷ ಎಲ್ಲಿ ಹೋಗಿ ಸ್ಪರ್ಧಿಸಿ ಎಂದು ಸೂಚನೆ ನೀಡಿದರೂ ನಾನು ಅಲ್ಲಿ ಸ್ಪರ್ಧಿಸುತ್ತೇನೆ. ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ, ಅದಕ್ಕೆ ತಾನು ಬದ್ಧ. ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ ಎಂದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸತ್ಯ. ಸರಕಾರ ವಿಚಾರವಾದಿಗಳು, ರಾಷ್ಟ್ರೀಯ ವಾದಿಗಳ ಹತ್ಯೆ ಪ್ರಕರಣಗಳ ತನಿಖೆ ನಡೆಸದೆ, ಪೂರ್ವಗ್ರಹ ಪೀಡಿತ ತನಿಖೆ ಸರಿಯಲ್ಲ. ತ್ವರಿತಗತಿ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಟೆಲಿಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು. ಅಲ್ಲದೆ, ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕೋರಿದರು.