ಜಪಾನ್ ಓಪನ್: ಸಿಂಧು, ಸೆನಾ, ಶ್ರೀಕಾಂತ್ ಶುಭಾರಂಭ

Update: 2017-09-20 18:30 GMT

ಟೋಕಿಯೊ, ಸೆ.20: ಕೊರಿಯಾ ಓಪನ್ ಚಾಂಪಿಯನ್ ಪಿ.ವಿ. ಸಿಂಧು, ವಾರಗಳ ವಿಶ್ರಾಂತಿಯ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ಮರಳಿದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಜಪಾನ್ ಓಪನ್ ಸೂಪರ್ ಸರಣಿಯಲ್ಲಿ ಎರಡನೆ ಸುತ್ತು ತಲುಪುವ ಮೂಲಕ ಶುಭಾರಂಭ ಮಾಡಿದರು.

ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಜಪಾನ್‌ನ ಮಿನಟಸು ಮಿಟಾನಿ ಅವರನ್ನು 12-21, 21-15, 21-17 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಒಂದೇ ವಾರದಲ್ಲಿ ಎರಡನೆ ಬಾರಿ ಮಿಟಾನಿಗೆ ಸೋಲುಣಿಸಿದರು. ಕೊರಿಯಾ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಮಿಟಾನಿ ಅವರನ್ನು 3 ಗೇಮ್‌ಗಳ ಅಂತರದಿಂದ ಮಣಿಸಿದ್ದರು.

 ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ವಿಶ್ವದ ನಂ.4ನೆ ಆಟಗಾರ್ತಿ ಸಿಂಧು ಮುಂದಿನ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ನೊರೊಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ. ಕಳೆದ 3 ಟೂರ್ನಿಗಳಲ್ಲಿ ಮೂರನೆ ಬಾರಿ ಒಕುಹರಾರನ್ನು ಎದುರಿಸಲಿದ್ದಾರೆ. ಈ ಇಬ್ಬರು ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಕೊರಿಯಾ ಓಪನ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. 83 ನಿಮಿಷಗಳ ಕಾಲ ನಡೆದಿದ್ದ ಕೊರಿಯಾ ಓಪನ್‌ನಲ್ಲಿ ಸಿಂಧು ಚಾಂಪಿಯನ್ ಅಗಿದ್ದರು. ವಿಶ್ವ ಟೂರ್ನಿಯಲ್ಲಿ ಒಕುಹರಾ ಜಯಭೇರಿ ಬಾರಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಸೈನಾ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪೊರ್ನಪಾವಿ ಚೋಚುವಾಂಗ್‌ರನ್ನು ಕೇವಲ 39 ನಿಮಿಷಗಳ ಹೋರಾಟದಲ್ಲಿ 21-17, 21-9 ಗೇಮ್‌ಗಳ ಅಂತರದಿಂದ ಮಣಿಸಿದರು.

ಕಾಲು ನೋವಿನಿಂದಾಗಿ ಕೊರಿಯಾ ಓಪನ್‌ನಿಂದ ದೂರ ಉಳಿದಿದ್ದ ಸೈನಾ ಮುಂದಿನ ಸುತ್ತಿನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನ್ ಮರಿನ್ ಸವಾಲು ಎದುರಿಸಲಿದ್ದಾರೆ. ಸ್ಪೇನ್ ಆಟಗಾರ್ತಿಯ ವಿರುದ್ಧ 4-3 ದಾಖಲೆ ಹೊಂದಿರುವ ಸೈನಾ ಕಳೆದ ನಾಲ್ಕು ಮುಖಾಮುಖಿಯಲ್ಲಿ ಮೂರು ಬಾರಿ ಸೋತಿದ್ದಾರೆ.

ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯದಲ್ಲಿ ಪ್ರಶಸ್ತಿ ಜಯಿಸಿರುವ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ವಿಶ್ವದ ನಂ.10ನೆ ಆಟಗಾರ ಟಿಯನ್ ಹೌವೀ ವಿರುದ್ಧ 21-15, 12-21, 21-11 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಿಂಗಾಪುರ ಓಪನ್ ಫೈನಲ್‌ಗೆ ತಲುಪಿದ್ದ 8ನೆ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಹ್ಯೂ ಯೂನ್‌ರನ್ನು ಎದುರಿಸಲಿದ್ದಾರೆ. ವಿಶ್ವದ ನಂ.8ನೆ ಆಟಗಾರ ಶ್ರೀಕಾಂತ್ ಯೂನ್ ವಿರುದ್ಧ 2-2 ಹೆಡ್-ಟು--ಹೆಡ್ ದಾಖಲೆ ಹೊಂದಿದ್ದಾರೆ. 2015ರಲ್ಲಿ ಎರಡು ಬಾರಿ ಸೋತಿದ್ದಾರೆ.

ಯುಎಸ್ ಓಪನ್ ಜಿಪಿ ಗೋಲ್ಡ್ ಚಾಂಪಿಯನ್ ಎಚ್.ಎಸ್.ಪ್ರಣಯ್ ಹಾಗೂ ಸೈಯದ್ ಮೋದಿ ಜಿಪಿ ಗೋಲ್ಡ್ ವಿನ್ನರ್ ಸಮೀರ್ ವರ್ಮ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ.

ಪ್ರಣಯ್ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟೊನ್ಸನ್‌ರನ್ನು 21-12, 21-14 ಗೇಮ್‌ಗಳಿಂದ ಮಣಿಸಿದರು. ಕೇವಲ 40 ನಿಮಿಷಗಳ ನಡೆದಿದ್ದ ಮತ್ತೊಂದು ಪಂದ್ಯದಲ್ಲಿ ಸಮೀರ್ ಥಾಯ್ಲೆಂಡ್‌ನ ಖೋಸಿಟ್ ಫೆಟ್‌ಪ್ರದಬ್‌ರನ್ನು 21-12, 21-19 ಅಂತರದಿಂದ ಸೋಲಿಸಿದ್ದಾರೆ.

ಸಮೀರ್‌ರ ಹಿರಿಯ ಸಹೋದರ ಸೌರಭ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಸೌರಭ್ ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡಾನ್ ವಿರುದ್ಧ 21-11, 15-21, 13-21ರಿಂದ ಶರಣಾದರು.

ಸಿಂಗಾಪುರ ಓಪನ್ ಚಾಂಪಿಯನ್ ಬಿ.ಸಾಯಿ ಪ್ರಣೀತ್ ರೋಚಕವಾಗಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಲೀ ಡೊಂಗ್ ಕಿಯುನ್ ವಿರುದ್ಧ 23-21, 17-21, 14-21 ಅಂತರದಿಂದ ಸೋತಿದ್ದಾರೆ. ಉದಯೋನ್ಮುಖ ಡಬಲ್ಸ್ ಆಟಗಾರ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅಶ್ವಿನಿ ಪೊನ್ನಪ್ಪರೊಂದಿಗೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಎರಡನೆ ಸುತ್ತು ತಲುಪಿದ್ದಾರೆ. ಸಾತ್ವಿಕ್-ಅಶ್ವಿನಿ ಜೋಡಿ ಥಾಯ್ಲೆಂಡ್‌ನ ಟಿನ್ ಇಸ್ರಿಯನೆಟ್ ಹಾಗೂ ಪಚರಪನ್ ಚೊಚುವಾಂಗ್‌ರನ್ನು 21-17, 21-13 ಗೇಮ್‌ಗಳಿಂದ ಸೋಲಿಸಿದ್ದಾರೆ.

 ಚಿರಾಗ್ ಶೆಟ್ಟಿ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಆಡಿದ ಸಾತ್ವಿಕ್ ಇಂಡೋನೇಷ್ಯಾದ ಮಾರ್ಕಸ್ ಫೆನಾಲ್ಡಿ ಹಾಗೂ ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 25-27, 15-21 ಅಂತರದಿಂದ ಸೋತಿದ್ದಾರೆ.

ಭಾರತದ ಹಿರಿಯ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಲೀ-ಜೆ-ಹ್ಯೂಯ್ ಹಾಗೂ ಲೀ ಯಾಂಗ್ ವಿರುದ್ಧ 18-21, 15-21 ಅಂತರದಿಂದ ಸೋಲುವುದರೊಂದಿಗೆ ಕೂಟದಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News