ಟ್ರಂಪ್ ಅನ್ನು ‘ಬೊಗಳುವ ನಾಯಿ’ಗೆ ಹೋಲಿಸಿದ ಉತ್ತರ ಕೊರಿಯಾ ವಿದೇಶಾಂಗ ಸಚಿವ!

Update: 2017-09-21 07:00 GMT

ಸಿಯೋಲ್, ಸೆ.21: ಉತ್ತರ ಕೊರಿಯಾ ದೇಶವು ಅಮೆರಿಕ ಮತ್ತದರ ಮಿತ್ರ ದೇಶಗಳನ್ನು ಬೆದರಿಸಿದ್ದೇ ಆದಲ್ಲಿ ತಾನು 2.6 ಕೋಟಿ ಜನಸಂಖ್ಯೆಯ ಆ ದೇಶವನ್ನು ‘ಸಂಪೂರ್ಣ ನಾಶಗೈಯ್ಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎಚ್ಚರಿಸಿದ್ದರೆ, ಉತ್ತರ ಕೊರಿಯಾದ ವಿದೇಶಾಂಗ ಸಚಿವ ರಿ ಯಾಂಗ್ ಹೋ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಟ್ರಂಪ್ ಅವರನ್ನು 'ಬೊಗಳುವ ನಾಯಿ'ಗೆ ಹೋಲಿಸಿದ್ದಾರೆ. ಟ್ರಂಪ್ ಅವರ ಹೇಳಿಕೆ ‘ಬೊಗಳುವ ನಾಯಿಯ ಸದ್ದಾಗಿದೆ’’ ಎಂಬರ್ಥದಲ್ಲಿ ಯಾಂಗ್ ಹೇಳಿದ್ದಾರೆ. ಟ್ರಂಪ್ ಅವರು ಉತ್ತರ ಕೊರಿಯಾದ ನಾಯಕ್ ಕಿಂಗ್ ಜೊಂಗ್ ಉನ್ ಅವರನ್ನು ‘ರಾಕೆಟ್ ಮ್ಯಾನ್’ ಎಂದೂ ಅಣಕವಾಡಿದ್ದರು.

‘‘ನಾಯಿಗಳು ಬೊಗಳಿದರೂ ಪೆರೇಡ್ ಮುಂದುವರಿಯುವುದು ಎಂಬ ಮಾತಿದೆ’’ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಾರ್ಯಾಲಯದೆದುರು ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಟ್ರಂಪ್ ಅವರು ನಾಯಿಯ ಬೊಗಳುವಿಕೆ ಸದ್ದಿನಿಂದ ನಮ್ಮನ್ನು ಅಚ್ಚರಿಗೊಳಿಸಬೇಕೆಂದಿದ್ದರೆ ಅವರು ಸ್ಪಷ್ಟವಾಗಿ ಕನಸು ಕಾಣುತ್ತಿದ್ದಾರೆ’’ ಎಂದು ಸಚಿವರು ಹೇಳಿದರು.

ಉತ್ತರ ಕೊರಿಯಾದ ನಾಯಕನನ್ನು ‘ರಾಕೆಟ್ ಮ್ಯಾನ್’ ಎಂದು ಟ್ರಂಪ್ ಅಣಕವಾಡಿರುವುದರ ಬಗ್ಗೆ ಪ್ರಶ್ನಿಸಿದಾಗ ‘‘ಅವರ ಸಹವರ್ತಿಗಳ ಬಗ್ಗೆ ನನ್ನ ಅನುಕಂಪವಿದೆ’’ ಎಂದಷ್ಟೇ ಹೇಳಿದರು.

ಉತ್ತರ ಕೊರಿಯಾ ಈ ತಿಂಗಳಾರಂಭದಲ್ಲಿ ತನ್ನ ಆರನೇ ಮತ್ತು ಅತಿ ದೊಡ್ಡ ಅಣು ಪರೀಕ್ಷೆಯನ್ನು ನಡೆಸಿತ್ತಲ್ಲದೆ ಈ ವರ್ಷ ಹಲವಾರು ಕ್ಷಿಪಣಿಗಳನ್ನೂ ಉಡಾಯಿಸಿತ್ತು.

ತರುವಾಯ ವಾಷಿಂಗ್ಟನ್ ಮತ್ತು ಪ್ಯೊಗ್ಯಾಂಗ್ ನಡುವೆ ವಾಕ್ಸಮರ ಮುಂದುವರಿದಿರುವಂತೆಯೇ ದಕ್ಷಿಣ ಕೊರಿಯಾ ದೇಶವು ಉತ್ತರ ಕೊರಿಯಾಗೆ 8 ಮಿಲಿಯನ್ ಡಾಲರ್ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಯೋಜನೆಗೆ ಅಸ್ತು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News