ಜಪಾನ್ ಓಪನ್: ಶ್ರೀಕಾಂತ್, ಪ್ರಣಯ್ ಕ್ವಾರ್ಟರ್ ಫೆನಲ್‌ಗೆ

Update: 2017-09-21 18:31 GMT

ಟೋಕಿಯೊ, ಸೆ.21: ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೊರಿಯಾ ಓಪನ್ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ರ ಸವಾಲು ಅಂತ್ಯಗೊಂಡಿದೆ.

325,000 ಡಾಲರ್ ಬಹುಮಾನ ಮೊತ್ತದ ಜಪಾನ್ ಓಪನ್ ಸೂಪರ್ ಸರಣಿಯ ಎರಡನೆ ಸುತ್ತಿನಲ್ಲಿ ಸಿಂಧು ಹಾಲಿ ವಿಶ್ವ ಚಾಂಪಿಯನ್ ನೊರೊಮಿ ಒಕುಹರಾ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಜಪಾನ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಜಯಭೇರಿ ಬಾರಿಸಿರುವ ಕಿಡಂಬಿ ಶ್ರೀಕಾಂತ್ ಹಾಗೂ ಎಚ್‌ಎಸ್ ಪ್ರಣಯ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸತತ ಮೂರನೆ ಬಾರಿ ಸ್ಥಳೀಯ ಫೇವರಿಟ್ ಒಕುಹರಾ ವಿರುದ್ಧ ಆಡಿರುವ ಸಿಂಧು ಬಹಳಷ್ಟು ತಪ್ಪೆಸಗಿದರು. 47 ನಿಮಿಷಗಳ ಕಾಲ ನಡೆದ ಏಕಪಕ್ಷೀಯ ಪಂದ್ಯದಲ್ಲಿ 18-21, 8-21 ಗೇಮ್‌ಗಳ ಅಂತರದಿಂದ ಶರಣಾದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ವಿರುದ್ಧ 16-21, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸೈನಾ ಸ್ಪೇನ್‌ನ ಮರಿನ್ ವಿರುದ್ಧ ಮೊದಲ ಗೇಮ್‌ನಲ್ಲಿ 14-10 ಹಾಗೂ ಎರಡನೆ ಗೇಮ್‌ನಲ್ಲಿ 6-4 ಮುನ್ನಡೆ ಸಾಧಿಸಿದ್ದರೂ ಗೆಲುವು ಸಾಧಿಸಲು ವಿಫಲರಾದರು.

ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಕೊರಿಯಾ ಓಪನ್ ಫೈನಲ್‌ನಲ್ಲಿ ಸಿಂಧು ಹಾಗೂ ಒಕುಹರಾ ನಡುವಿನ ಪಂದ್ಯ ಕ್ರಮವಾಗಿ 110 ನಿಮಿಷ ಹಾಗೂ 83 ನಿಮಿಷಗಳ ಕಾಲ ನಡೆದಿತ್ತು. ಆದರೆ, ಗುರುವಾರ ಇಲ್ಲಿ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಸಿಂಧು ತನ್ನ ಹಿಂದಿನ ಪ್ರದರ್ಶನ ಪುನರಾವರ್ತಿಸಲು ವಿಫಲರಾದರು. ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ 18-16 ರಿಂದ ಮುನ್ನಡೆ ಸಾಧಿಸಿ ಸ್ಪರ್ಧೆ ನೀಡಿದ್ದ ಸಿಂಧು ಎರಡನೆ ಗೇಮ್‌ನಲ್ಲಿ ಹೋರಾಟ ನೀಡದೇ ಸುಲಭವಾಗಿ ಶರಣಾದರು.

►ಶ್ರೀಕಾಂತ್, ಪ್ರಣಯ್‌ಗೆ ಜಯ:

ಇದೇ ವೇಳೆ 30 ನಿಮಿಷಗಳ ಅಂತ್ಯಗೊಂಡ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.8ನೆ ಆಟಗಾರ ಕೆ.ಶ್ರೀಕಾಂತ್ ಹಾಂಕಾಂಗ್‌ನ ಹ್ಯೂ ಯುನ್‌ರನ್ನು 21-12, 21-11 ಗೇಮ್‌ಗಳ ಅಂತರದಿಂದ ಮಣಿಸಿದರು.

ಇತ್ತೀಚೆಗೆ ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಶ್ರೀಕಾಂತ್ ಅಂತಿಮ-8ರ ಸುತ್ತಿನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಲೆಕ್ಸೆನ್‌ರನ್ನು ಎದುರಿಸಲಿದ್ದಾರೆ. ಅಲೆಕ್ಸನ್ ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ಶಿಪ್‌ನ್ನು ಜಯಿಸಿದ್ದಾರೆ.

ಪ್ರಸ್ತುತ ಶ್ರೀಕಾಂತ್-ಅಲೆಕ್ಸನ್ 2-2 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ. ಶ್ರೀಕಾಂತ್ ಡೆನ್ಮಾರ್ಕ್ ಆಟಗಾರನ ವಿರುದ್ಧ ಆಡಿರುವ ಇತ್ತೀಚೆಗಿನ ಎರಡು ಪಂದ್ಯಗಳಲ್ಲಿ ನೇರ ಗೇಮ್‌ಗಳಿಂದ ಸೋತಿದ್ದಾರೆ.

ಯುಎಸ್ ಓಪನ್ ಚಾಂಪಿಯನ್ ಪ್ರಣಯ್ ಚೈನೀಸ್ ತೈಪೆಯ ಸು ಜೆನ್ ಹಾವೊ ವಿರುದ್ಧ 21-16, 23-21 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಚೀನಾದ ಶಿ ಯೂಖಿ ಅವರನ್ನು ಎದುರಿಸಲಿದ್ದಾರೆ.

ಈ ವರ್ಷಾರಂಭದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ವಿಶ್ವದ ನಂ.2ನೆ ಆಟಗಾರ ಶಿ ಯೂಖಿ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸೈಯದ್ ಮೋದಿ ಜಿಪಿ ಗೋಲ್ಡ್ ಟೂರ್ನಿ ವಿಜೇತ ಸಮೀರ್ ವರ್ಮರನ್ನು 10-21, 21-17, 21-15 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ರಾಜ್ ರಾಂಕಿರೆಡ್ಡಿ ಇಂಡೋನೇಷ್ಯಾದ ಪ್ರವೀಣ್ ಜೋರ್ಡನ್ ಹಾಗೂ ಡೆಬ್ಬಿ ಸುಸಾಂಟೊ ವಿರುದ್ಧ 1 ಗಂಟೆ, 6 ನಿಮಿಷಗಳ ಕಾಲ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಕಠಿಣ ಹೋರಾಟ ನೀಡಿದರೂ 27-29, 21-16, 12-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News