ಕಾವೇರಿ ಮತ್ತೆ ಕಾವೇರದಿರಲಿ

Update: 2017-09-21 18:40 GMT

ಈ ಬಾರಿ ಮಳೆಯಾಗಿದೆಯಾದರೂ, ಅದು ಕಾವೇರಿ ವಿವಾದದ ಬೆಂಕಿಯನ್ನು ತಣಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎನ್ನುವುದರ ಸೂಚನೆಯನ್ನು ಸುಪ್ರೀಂಕೋರ್ಟ್ ಕರ್ನಾಟಕ ಸರಕಾರಕ್ಕೆ ನೀಡಿದೆ. ರಾಜ್ಯಾದ್ಯಂತ ಮಳೆಯಾಗಿದೆಯಾದರೂ, ಅದು ಸುಪ್ರೀಂಕೋರ್ಟ್ ಮನಸ್ಸನ್ನು ತಣಿಸುವಷ್ಟರ ಮಟ್ಟಿಗೆ ಅಲ್ಲ. ಈ ಕಾರಣದಿಂದ ಕಾವೇರಿ ನೀರು ಮತ್ತೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಅಸಮಾಧಾನವನ್ನು ಬಿತ್ತುವ ಸಾಧ್ಯತೆಗಳು ಕಾಣುತ್ತಿವೆ. ಮುಖ್ಯವಾಗಿ ಈ ಎರಡು ರಾಜ್ಯಗಳ ನಡುವೆ ಅಸಮಾಧಾನಗಳು ಸ್ಫೋಟವಾಗುವುದು ರಾಜಕೀಯವಾಗಿಯೂ ಕೇಂದ್ರ ಸರಕಾರಕ್ಕೆ ಅಗತ್ಯವಿರುವಂತಿದೆ.

ಸದ್ಯಕ್ಕೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ, ಬಿಜೆಪಿ ಆ ರಾಜ್ಯವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವುದು ಕಂಡು ಬರುತ್ತಿದೆ. ‘ಅಮ್ಮ’ನನ್ನು ಕಳೆದುಕೊಂಡಿರುವ ತಮಿಳುನಾಡಿನ ಎಡಿಎಂಕೆ ಅತ್ತ ಧರಿ-ಇತ್ತ ಪುಲಿ ಎನ್ನುವ ರೀತಿಯಲ್ಲಿ ಅತಂತ್ರವಾಗಿದೆ. ಸದ್ಯಕ್ಕೆ ಶಶಿಕಲಾ ಅವರ ಪರವಾಗಿರುವ ಶಾಸಕರ ಕೈಗಳನ್ನು ಹೈಕೋರ್ಟ್ ಮೂಲಕ ಕಟ್ಟಿ ಹಾಕಲಾಗಿದೆ. ಇದೀಗ ಕೇಂದ್ರದ ಕೃಪೆಯಿಂದಲೇ ಅಲ್ಲಿನ ಸರಕಾರ ಮುಂದುವರಿಯುತ್ತಿದೆ. ಇದೇ ಹೊತ್ತಿನಲ್ಲಿ ಸುಪ್ರೀಂಕೋರ್ಟ್ ಕಾವೇರಿಯ ಕುರಿತಂತೆ ಮಾತನಾಡಿರುವುದು, ಒಂದಲ್ಲ ಒಂದು ರೀತಿಯಲ್ಲಿ ಉಭಯ ರಾಜ್ಯಗಳ ರಾಜಕೀಯದ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಕಾವೇರಿ ನೀರು ನಿರ್ವಹಣಾ ಮಂಡಳಿಯ ಸ್ಥಾಪನೆಯ ಬಗ್ಗೆ ಒತ್ತು ನೀಡಲು ತಮಿಳು ನಾಡು ಕೋರಿದ್ದು, ಇದೀಗ ಸುಪ್ರೀಂಕೋರ್ಟ್ ಅದರ ಮನವಿಗೆ ಪೂರಕವಾಗಿ ಸ್ಪಂದಿಸಿದೆ.

ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶವನ್ನು ನೀಡಲಿಲ್ಲವಾದರೂ, ಕೇಂದ್ರ ಸರಕಾರವನ್ನು ಸಣ್ಣ ದನಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ. 2007ರ ಕಾವೇರಿ ನ್ಯಾಯಾಧಿಕರಣದ ಅಂತಿಮ ಆದೇಶವನ್ನು ಇನ್ನೂ ಅನುಷ್ಠಾನಗೊಳಿಸದಿರುವ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರಕಾರದ ಹಿಂಜರಿಕೆಯನ್ನೂ ಅದು ಪ್ರಶ್ನಿಸಿದೆ. ಇಲ್ಲಿ ನಿರ್ವಹಣಾ ಮಂಡಳಿಯ ರಚನೆಯ ಕುರಿತಂತೆ ಅದು ಆದೇಶ ನೀಡದೇ ಇರಬಹುದು. ಆದರೆ ಆ ನಿಟ್ಟಿನಲ್ಲಿ ತನ್ನ ಒಲವನ್ನಂತೂ ವ್ಯಕ್ತಪಡಿಸಿದೆ. ಇದು ತನ್ನ ನಿಲುವುದು ಎನ್ನುವುದರ ಸೂಚನೆಯನ್ನೂ ನೀಡಿದೆ.

ಇದೊಂದು ರೀತಿ, ತಮಿಳುನಾಡಿಗೆ ಪೂರಕವಾಗಿರುವ ಸುಪ್ರೀಂ ಕೋರ್ಟ್‌ನ ಸ್ಪಂದನೆಯಾಗಿದೆ. ಮುಂದಿನ ವರ್ಷ ಈ ಬಗ್ಗೆ ಸುಪ್ರೀಂಕೋರ್ಟ್ ಅಧಿಕೃತ ತೀರ್ಪನ್ನು ನೀಡುವ ಸಾಧ್ಯತೆಯೂ ಇದೆ. ಕರ್ನಾಟಕ ಅದೇನೇ ವಾದ ಮಂಡನೆ ಮಾಡಿದರೂ ನೀರು ನಿರ್ವಹಣಾ ಮಂಡಳಿ ಸ್ಥಾಪನೆಯಾಗುವುದನ್ನು ತಡೆಯುವುದು ಸಾಧ್ಯವಿಲ್ಲ ಎನ್ನುವುದು ಖಚಿತವಾಗುತ್ತಿದೆ. ಈಗ ಇರುವ ಮಾತೆಂದರೆ, ಮಂಡಳಿಗೆ ನೀರಿನ ಕುರಿತಂತೆ ನಿರ್ಧಾರವನ್ನು ತಳೆಯಲು ಇರುವ ಅಧಿಕಾರ ಎಲ್ಲಿಯವರೆಗೆ ಎನ್ನುವುದು. ಈ ಮಂಡಳಿ, ಕೇಂದ್ರ ಸರಕಾರದ ಆಣತಿಯಂತೆ ಕಾರ್ಯನಿರ್ವಹಿಸಿದರೆ ಅಥವಾ ತನ್ನ ಮೂಗಿನ ನೇರಕ್ಕೆ ತೀರ್ಪನ್ನು ನೀಡಿದರೆ ಅದರ ನೇರ ಬಲಿ ಪಶು ಕರ್ನಾಟಕ ರಾಜ್ಯವೇ ಆಗಿದೆ. ಆದುದರಿಂದ ನಿರ್ವಹಣಾ ಮಂಡಳಿಯ ಕುರಿತಂತೆ ರಾಜ್ಯ ಸರಕಾರ ಆತಂಕವ್ಯಕ್ತಪಡಿಸಿದೆ.

ಇದರ ವಿರುದ್ಧ ನಮ್ಮ ವಕೀಲರು ಸಮರ್ಥ ವಾದ ಮಂಡಿಸಲಿದ್ದಾರೆ. ನಿರ್ವಹಣಾ ಮಂಡಳಿ ರಚನೆಗೆ ಆಸ್ಪದ ನೀಡುವುದಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರಾದರೂ, ಅದೊಂದು ತಾತ್ಕಾಲಿಕವಾಗದ ಸಾಂತ್ವನವಾಗಿದೆ. ಕರ್ನಾಟಕ ತನ್ನ ವಾದವನ್ನು ಮಂಡಿಸುತ್ತಲೇ ಬಂದಿದೆಯಾದರೂ, ಸುಪ್ರೀಂಕೋರ್ಟ್ ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ. ಒಂದು ಹಂತದಲ್ಲಿ ರಾಜ್ಯ ಸರಕಾರ ‘ನ್ಯಾಯಾಂಗ ನಿಂದನೆ’ಯಂತಹ ತೂಗುಗತ್ತಿಯ ಅಡಿಯಲ್ಲಿ ನಿಂತುಕೊಂಡಿತು. ಇಂತಿಷ್ಟು ನೀರು ಬಿಡಲೇ ಬೇಕು ಎಂದು ಸುಪ್ರೀಂಕೋರ್ಟ್ ಹೇಳಿದರೆ, ಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಸರಕಾರ ಬಂತು.

ಸುಪ್ರೀಂಕೋರ್ಟ್‌ಗೆ ತನ್ನ ಘನತೆಯ ಪ್ರಶ್ನೆ. ರಾಜ್ಯ ಸರಕಾರಕ್ಕೆ ರೈತರ ಹಿತಾಸಕ್ತಿಯ ಪ್ರಶ್ನೆ. ಒಟ್ಟಿನಲ್ಲಿ, ಸರಕಾರ ತನ್ನ ಭಾಗದ ಹಗ್ಗವನ್ನು ಬಲವಾಗಿ ಜಗ್ಗಿದಾಗ ಸುಪ್ರಿಂಕೋರ್ಟ್ ತುಸು ಸಡಿಲವಾಯಿತು. ಹಾಗೂ ಹೀಗೂ ಬಿಕ್ಕಟ್ಟು ಪರಿಹಾರವಾಯಿತು. ಆದುದರಿಂದ ಸುಪ್ರೀಂಕೋರ್ಟ್‌ಗೂ ಪದೇ ಪದೇ ಈ ಸಮಸ್ಯೆಯನ್ನು ಮುಖಾಮುಖಿಯಾಗುವುದು ಇಷ್ಟವಿದ್ದಂತಿಲ್ಲ. ಮಂಡಳಿ ರಚನೆ ಅದರ ಪಾಲಿಗೂ ಅನಿವಾರ್ಯವಾಗಿದೆ. ಮಂಡಳಿಯ ಸದಸ್ಯರು ಸರ್ವಾಧಿಕಾರಿಗಳಾದರೆ ಅದರ ನಷ್ಟ ಕರ್ನಾಟಕಕ್ಕೆ. ಯಾಕೆಂದರೆ ದಿಲ್ಲಿಯಲ್ಲಿ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ರಾಜಕೀಯ ಬಲವಿದೆ. ಕರ್ನಾಟಕದಲ್ಲಿರುವ ರಾಷ್ಟ್ರೀಯ ಪಕ್ಷಗಳು ಕಟ್ಟ ಕಡೆಗೆ ದಿಲ್ಲಿಯಲ್ಲಿರುವ ವರಿಷ್ಠರ ಮಾತಿಗೆ ಬಾಯಿ ಮುಚ್ಚಿ ತೆಪ್ಪಗಾಗಬೇಕು. ಇದರಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎರಡೂ ಹೊರತಲ್ಲ.

ಕೇಂದ್ರದ ಮೇಲೆ ಪ್ರಭಾವಬೀರಬಲ್ಲ ರಾಜಕೀಯ ಇಚ್ಛಾಶಕ್ತಿ ಕರ್ನಾಟಕಕ್ಕಿಲ್ಲದೇ ಇರುವುದೇ ಕಾವೇರಿ ನೀರಿನ ವಿವಾದದಲ್ಲಿ ಕರ್ನಾಟಕ ಪದೇ ಪದೇ ಮುಖಭಂಗಕ್ಕೀಡಾಗುವುದಕ್ಕೆ ಮುಖ್ಯ ಕಾರಣ. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿರುವುದು ಪ್ರಾದೇಶಿಕ ಪಕ್ಷಗಳು. ಅವರ ರಾಜಕೀಯ ಬರೇ ತಮಿಳುನಾಡನ್ನಷ್ಟೇ ಕೇಂದ್ರೀಕರಿಸಿ ನಡೆಯುತ್ತದೆ. ಕೇಂದ್ರದೊಂದಿಗೆ ಅದೇನು ಚೌಕಾಶಿ ಮಾಡಬೇಕೆಂದಿದ್ದರೂ, ಅದರಲ್ಲಿ ತಮಿಳುನಾಡಿನ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಕರ್ನಾಟಕದಿಂದ ಅತ್ಯಧಿಕ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಆದರೂ ಇವರು ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗಿ ತಮ್ಮ ಒತ್ತಡವನ್ನು ಹೇರುವುದಕ್ಕೆ ಸಂಪೂರ್ಣವಾಗಿ ವಿಫಲರಾದರು.

ಮಹಾದಾಯಿ ಯೋಜನೆಗೆ ಸಂಬಂಧಪಟ್ಟಂತೆ ಇರಬಹುದು, ರೈತರ ಸಾಲ ಮನ್ನಾಗೆ ಸಂಬಂಧಿಸಿ ಇರಬಹುದು, ಇದೀಗ ಕಾವೇರಿ ವಿವಾದಕ್ಕೆ ಸಂಬಂಧಿಸಿಯೇ ಇರಬಹುದು. ಕರ್ನಾಟಕದ ಧ್ವನಿಯನ್ನು ಪ್ರಧಾನಿಯ ಬಳಿಗೆ ತಲುಪಿಸುವ ಪ್ರಯತ್ನವನ್ನು ಒಂದು ಬಾರಿಯೂ ಇವರು ಮಾಡಲಿಲ್ಲ. ಇದೇ ಸಂದರ್ಭದಲ್ಲಿ, ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ತನಗೆ ಪೂರಕವಾಗಿಸಿಕೊಳ್ಳಲು ಕೇಂದ್ರ ಬಿಜೆಪಿಯು ತಮಿಳುನಾಡಿನ ನಾಯಕರ ಮಾತುಗಳಿಗೆ ತಲೆದೂಗುತ್ತಿದೆ. ಕಾವೇರಿಯ ವಿಷಯದಲ್ಲಿ ಕರ್ನಾಟಕದ ಜನರು ತಮಗೆ ಅನ್ಯಾಯವಾಗುತ್ತಿದೆ ಎಂದು ಕೂಗೆಬ್ಬಿಸಲು ಕೇಂದ್ರದ ಈ ಮಲತಾಯಿ ಧೋರಣೆಯೂ ಒಂದು ಕಾರಣ.

ಆದುದರಿಂದಲೇ, ಕೇಂದ್ರದ ನಿಯಂತ್ರಣದಲ್ಲಿರುವ ನಿರ್ವಹಣಾ ಮಂಡಳಿ, ಕರ್ನಾಟಕಕ್ಕೆ ಅನ್ಯಾಯ ಮಾಡಬಹುದು ಎಂದು ಅಂಜುತ್ತಿದೆ. ಅದೇನೇ ಇರಲಿ. ತಮಿಳುನಾಡಿನ ರೈತರಿರಲಿ, ಕರ್ನಾಟಕದ ರೈತರಿರಲಿ ಅವರ ಸಂಕಟಗಳನ್ನು ರಾಜಕೀಯಗೊಳಿಸುವುದು ತಪ್ಪು. ಕರ್ನಾಟಕ ನೀರು ಹರಿಸಲು ಸಾಮರ್ಥ್ಯ ಹೊಂದಿದೆ ಎಂದಾದರೆ ಖಂಡಿತವಾಗಿಯೂ ಅದು ತಮಿಳುನಾಡಿನ ರೈತರಿಗೆ ನೀರನ್ನು ನೀಡಲು ಹಿಂಜರಿಕೆ ವ್ಯಕ್ತಪಡಿಸಬಾರದು. ಇದೇ ಸಂದರ್ಭದಲ್ಲಿ ನಮ್ಮ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತಮಿಳುನಾಡಿಗೆ ನೀರುಬಿಡಬೇಕು ಎಂದು ಬಯಸುವುದು ಅತಿರೇಕವಾಗುತ್ತದೆ. ಪ್ರತಿಷ್ಠೆಗಾಗಿ, ರಾಜಕೀಯ ಲಾಭಕ್ಕಾಗಿ ರೈತರನ್ನು ಉಭಯ ರಾಜ್ಯಗಳೂ ಸಂಕಟಕ್ಕೆ ದೂಡಬಾರದು. ಈ ನಿಟ್ಟಿನಲ್ಲಿ, ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಪರಸ್ಪರ ಮಾತುಕತೆ ನಡೆಸಿ ತಮ್ಮ ತಮ್ಮ ರೈತರ ಅಳಲುಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಕೆಲಸ ಶುರುವಿನಿಂದಲೇ ಆರಂಭವಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News