ಟ್ರಂಪ್ ಒಬ್ಬ 'ಮಾನಸಿಕ ಅಸ್ವಸ್ಥ, ಗ್ಯಾಂಗ್‍ಸ್ಟರ್'

Update: 2017-09-22 09:47 GMT

ಸಿಯೋಲ್,ಸೆ.22 :  ಉತ್ತರ ಕೊರಿಯಾ ದೇಶದ ಅಧಿನಾಯಕ ಕಿಮ್ ಜಾಂಗ್ ಉನ್ ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮಾನಸಿಕ ಅಸ್ವಸ್ಥ, ಗ್ಯಾಂಗ್‍ಸ್ಟರ್  ಎಂಬಿತ್ಯಾದಿ  ಪದಗಳನ್ನು ಉಪಯೋಗಿಸಿ ಹೀಗಳೆದಿದ್ದಾರೆ.

ಉತ್ತರ ಕೊರಿಯಾವನ್ನು ಸಂಪೂರ್ಣ ನಾಶಗೈಯ್ಯುವ ಹೊರತಾಗಿ ಅಮೆರಿಕಾಗೆ ಬೇರೆ ಆಯ್ಕೆಯೇ ಇಲ್ಲ  ಎಂದು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನುದ್ದೇಶಿಸಿ ಅಮೆರಿಕಾದ ಅಧ್ಯಕ್ಷರು ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸುತ್ತಾ  ರಾಕೆಟ್ ಮ್ಯಾನ್ ಎಂದೂ ಕರೆಯಲ್ಪಡುವ ಕಿಮ್ ಅವರು ಮೇಲಿನಂತೆ ಹೇಳಿದ್ದಾರೆ.

ಕಿಮ್ ಅವರ ಪ್ರತಿಕ್ರಿಯೆ ಬರುವುದಕ್ಕಿಂತ ಮುಂಚೆಯೇ  ಉತ್ತರ ಕೊರಿಯಾದ ವಿದೇಶಾಂಗ ಸಚಿವರು ಟ್ರಂಪ್ ಅವರನ್ನು ಬೊಗಳುವ ನಾಯಿಗೆ ಹೋಲಿಸಿದ್ದರು.

ಟ್ರಂಪ್ ಅವರು ತಮ್ಮ ಹೇಳಿಕೆಗೆ ದೊಡ್ಡ ಬೆಲೆ ತೆರಬೇಕಾಗಬಹುದೆಂದು ಕಿಮ್ ಅವರು ಅಮೆರಿಕಾ ಅಧ್ಯಕ್ಷರನ್ನು ಎಚ್ಚರಿಸಿದ್ದಾರೆ.
ಉತ್ತರ ಕೊರಿಯಾ ತನ್ನ ಆರನೇ ಹಾಗೂ ಅತ್ಯಂತ ಪ್ರಬಲ ಅಣು ಪರೀಕ್ಷೆ ನಡೆಸಿದ ಕೆಲವೇ ವಾರಗಳ ಅಂತರದಲ್ಲಿ ಟ್ರಂಪ್ ಅವರ ಹೇಳಿಕೆ ಮಂಗಳವಾರ ಬಂದಿತ್ತು. ಈ ಬೆಳವಣಿಗೆಯ ನಂತರ ಚೀನಾ ಮತ್ತು ರಷ್ಯಾದ ಶಾಂತಿ ಮಂತ್ರದ ಹೊರತಾಗಿಯೂ ವಾಷಿಂಗ್ಟನ್ ಉತ್ತರ ಕೊರಿಯಾದ ಮೇಲೆ ತನ್ನ ಕಬಂಧಬಾಹುಗಳನ್ನು ಚಾಚಲು ಯತ್ನಿಸಿದೆ.

ಗುರುವಾರ ಟ್ರಂಪ್ ಅವರು ಟ್ವೀಟ್ ಒಂದನ್ನು ಮಾಡಿ ``ಇಂದು ನಾನು ಉತ್ತರ ಕೊರಿಯಾ ಸಂಬಂಧ ಆದೇಶ ನೀಡುತ್ತಿದ್ದೇನೆ. ನಾವೆಲ್ಲರೂ ಆ ದೇಶವನ್ನು ಸಂಪೂರ್ಣ ಅಣ್ವಸ್ತ್ರರಹಿತವನ್ನಾಗಿಸಲು ಪ್ರಯತ್ನಿಸೋಣ,'' ಎಂದು ಬರೆದಿದ್ದರು.

``ವಿಶ್ವ ಸಂಸ್ಥೆಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷರ ಮಾನಸಿಕ ಅಸ್ವಸ್ಥ ರೀತಿಯ ವರ್ತನೆ ಅನೈತಿಕವಾಗಿದೆ ಹಾಗೂ ಒಂದು ರಾಷ್ಟ್ರವನ್ನು ಸಂಪೂರ್ಣ ನಾಶಗೈಯ್ಯುವುದಾಗಿ ಅವರ ಹೇಳಿಕೆಯಿಂದಾಗಿ ಸಾಮಾನ್ಯರೂ ವಿವೇಚನೆಯ ಬಗ್ಗೆ ಯೋಚಿಸುವಂತೆ ಮಾಡಿದೆ'' ಎಂದು ಉತ್ತರ ಕೊರಿಯಾದ ಸರಕಾರಿ ಸುದ್ದಿ ಸಂಸ್ಥೆಯ ಮೂಲಕ ಹೊರಡಿಸಿದ ತಮ್ಮ ಹೇಳಿಕೆಯಲ್ಲಿ ಕಿಮ್ ಜೊಂಗ್ ಉನ್ ಹೇಳಿದ್ದಾರೆ.

``ಟ್ರಂಪ್ ಅವರ ಚುನಾವಣಾ ಪ್ರಚಾರದ ಸಂದರ್ಭ ಚಾಲ್ತಿಯಲ್ಲಿದ್ದ ಪದಗಳಾದ `ರಾಜಕೀಯ ಸಾಮಾನ್ಯ,' ಹಾಗೂ `ರಾಜಕೀಯ ಪಾಷಂಡಿ' ಮುಂತಾದ ಪದಗಳು ನನಗೆ ನೆನಪಾಗುತ್ತಿವೆ,'' ಎಂದೂ ಕಿಮ್ ಹೇಳಿಕೊಂಡಿದ್ದಾರಲ್ಲದೆ ಟ್ರಂಪ್ ಅವರು ಅಮೆರಿಕಾ ಅಧ್ಯಕ್ಷನಾಗಲು ಅಯೋಗ್ಯ, ಅವರೊಬ್ಬರು ರಾಜಕಾರಣಿಯಲ್ಲ ಬದಲು ಬೆಂಕಿಯೊಡನೆ ಸರಸವಾಡಲು ಇಚ್ಛಿಸುವ ಒಬ್ಬ ಗ್ಯಾಂಗ್‍ಸ್ಟರ್ ಇದ್ದಂತೆ,'' ಎಂದರು.

ಟ್ರಂಪ್ ಅವರನ್ನು `ಡೋಟರ್ಡ್' (ಆಕ್ಸ್‍ಫರ್ಡ್ ಆನ್‍ಲೈನ್ ಪ್ರಕಾರ ದುರ್ಬಲ ಹಾಗೂ ಮುದಿತನದಿಂದ ಬಳಲುತ್ತಿರುವವನು) ಎಂದೂ ಬಣ್ಣಿಸಿದ ಕಿಮ್, ಟ್ರಂಪ್ ಗೆ  ``ಕಿವಿ ಸರಿಯಾಗಿ ಕೇಳಿಸದೇ ಇರುವುದರಿಂದ ಮಾತಿಗಿಂತ ಕೃತಿಯ ಮೂಲಕವೇ ಅವರನ್ನು ನಿಭಾಯಿಸಬೇಕು,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News