ಹಂತಕರ ಬಂಧನಕ್ಕೆ ‘ಸಿಟ್’ ತಂಡದಿಂದ ಸಾಕ್ಷ್ಯ ಸಂಗ್ರಹ: ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು, ಸೆ. 22: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ‘ಸಿಟ್’ ತಂಡ ಹಂತಕರ ಬಂಧನಕ್ಕೆ ಸಾಕ್ಷ್ಯಗಳ ಸಂಗ್ರಹದಲ್ಲಿ ತೊಡಗಿದ್ದು, ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗ ಸರಿಯಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಟ್ ತನಿಖೆಗೆ ಯಾವುದೇ ಗಡುವು ನೀಡಿಲ್ಲ. ಆದರೆ, ಆದಷ್ಟು ಶೀಘ್ರದಲ್ಲೇ ತನಿಖೆ ಪೂರ್ಣಗೊಳ್ಳಲಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಡಪಂಥೀಯರ ಮತ್ತು ಬಲಪಂಥೀಯರ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ ಎಂದರು.
ಕೋಮು ಸಂಘರ್ಷದಿಂದ ಉದ್ವಿಗ್ನಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಪರಿಸ್ಥಿತಿ ಶಾಂತವಾಗಿದ್ದು, ನಿಯಂತ್ರಣದಲ್ಲಿದೆ. ಅಲ್ಲಿಯ ಸ್ಥಳೀಯರಿಗೆ ಯಾವುದೇ ಪ್ರತಿಭಟನೆ, ರಾಜಕೀಯವೂ ಬೇಡವಾಗಿದೆ ಎಂದ ಅವರು, ಬಿಜೆಪಿ ಮಂಗಳೂರು ಚಲೋ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ತಡೆ ಸಿಕ್ಕರೆ ತಪ್ಪು ನಡೆದಿಲ್ಲವೇ: ಶಿವರಾಮಕಾರಂತ ಬಡಾವಣೆ ಡಿ-ನೋಟಿಫೈ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧದ ತನಿಖೆಗೆ ಹೆೆಕೋರ್ಟ್ ತಡೆಯಾಜ್ಞೆ ನೀಡಿದರೆ, ತಪ್ಪು ನಡೆಸಿಲ್ಲ ಅಂತ ಅರ್ಥವಲ್ಲವಲ್ಲ. ನ್ಯಾಯಾಲಯದಲ್ಲಿ ತಡೆ ಸಿಗುವುದು ಸಹಜ. ಅದು ತೆರವು ಆಗಬಹುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರೈತರಿಗೆ ಬಿಜೆಪಿ ಖಾಲಿ ಕಪ್: ಉತ್ತರ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ‘ಮಹಾದಾಯಿ’ ವಿಚಾರದಲ್ಲಿ ರಾಜ್ಯದ ಜನತೆಗೆ ಬಿಜೆಪಿಯ ಮೇಲಿನ ವಿಶ್ವಾಸವೇ ಹೊರಟು ಹೋಗಲಿದೆ ಎಂದು ರಾಮಲಿಂಗಾರೆಡ್ಡಿ ಎಚ್ಚರಿಸಿದರು.
ರೈತರ ಸಾಲಮನ್ನಾ ಲಾಲಿಪಪ್ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಆದರೆ, ಕೇಂದ್ರ ಸರಕಾರ ಸಂಕಷ್ಟದಲ್ಲಿರುವ ರೈತರಿಗೆ ಅದನ್ನು ಕೊಟ್ಟಿಲ್ಲ. ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಿದೆ. ಆದರೆ, ಕೇಂದ್ರ ಬರದಿಂದ ಕಂಗೆಟ್ಟ ರೈತರಿಗೆ ಖಾಲಿ ಕಪ್ ಕೊಟ್ಟಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಉಳಿದಂತೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ.
-ರಾಮಲಿಂಗಾರೆಡ್ಡಿ, ಗೃಹ ಸಚಿವ