ರಾಜ್ಯ ಸರಕಾರಕ್ಕೆ ಮುಖಭಂಗ: ಗೋ. ಮಧುಸೂದನ್
ಬೆಂಗಳೂರು, ಸೆ.22: ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಏಕಸದಸ್ಯಪೀಠ ತಡೆ ನೀಡಿರುವುದು ರಾಜ್ಯ ಸರಕಾರಕ್ಕೆ ಭಾರಿ ಮುಖಭಂಗವಾದಂತಾಗಿದೆ ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈಕೋರ್ಟ್ ಏಕಸದಸ್ಯ ಪೀಠವು ಯಡಿಯೂರಪ್ಪಗೆ ನ್ಯಾಯ ಸಿಕ್ಕಿದೆ. ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಸುಳ್ಳು ಆರೋಪಗಳನ್ನು ಮಾಡಿದ್ದು ಸಾಬೀತಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಒಂದೇ ಸ್ವರೂಪದ ಅಪರಾಧ ಆರೋಪಗಳಿರುವ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಎಫ್‌ಐಆರ್ ಸಲ್ಲಿಸಲು ಅವಕಾಶವಿಲ್ಲ ಎನ್ನುವ ಅಂಶವನ್ನು ಹೈಕೋರ್ಟ್ ಪರಿಗಣಿಸಿದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡ ತೀರ್ಮಾನವನ್ನು ಪ್ರಶ್ನಿಸಿ, ಯಡಿಯೂರಪ್ಪರನ್ನು ಆರೋಪಿಯನ್ನಾಗಿಸುವ ಮೊದಲು ರಾಜ್ಯಪಾಲರ ಪೂರ್ವಾನುಮತಿಯನ್ನು ಪಡೆದಿರಲಿಲ್ಲ. ಇದರಿಂದಾಗಿ ಎಸಿಬಿಯಿಂದ ಸಲ್ಲಿಕೆಯಾಗಿರುವ ಎಫ್‌ಐಆರ್‌ನ ಪ್ರಸ್ತುತತೆಯನ್ನು ನ್ಯಾಯಾಲಯ ಪ್ರಶ್ನಿಸಿದೆ ಎಂದು ಹೇಳಿದರು.
ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯೆ ಹೊರಬೀಳದಿರುವಾಗ ಅಕ್ರಮ ನಡೆದಿದೆ ಎನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ ಎನ್ನುವ ಯಡಿಯೂರಪ್ಪ ಪರ ವಾದವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. 257 ಎಕರೆ ಜಮೀನು ಡಿನೋಟಿಫೈ ಆಗದೆ ಇದ್ದರೂ, ಡಿನೋಟಿಫೈ ಆಗಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಸರಕಾರಕ್ಕಾಗಲಿ, ಬಿಡಿಎಗಾಗಲಿ ಯಾವುದೇ ನಷ್ಟವೂ ಆಗಿಲ್ಲ ಎಂಬ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದು ತಿಳಿಸಿದರು.
ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನೆ ನ್ಯಾಯಾಲಯ ರದ್ದುಪಡಿಸಿರುವುದರಿಂದ ಅಕ್ರಮ ನಡೆದಿದೆ ಎನ್ನುವ ಆರೋಪವೆ ಈಗ ಅಪ್ರಸ್ತುತವಾಗಿದೆ. ಹೈಕೋರ್ಟ್ ಯಡಿಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿರುವ ಎರಡು ಎಫ್‌ಐಆರ್‌ಗಳಿಗೆ ತಡೆ ನೀಡಿರುವುದು ರಾಜ್ಯ ಸರಕಾರದ ರಾಜಕೀಯ ದುರುದ್ದೇಶವನ್ನು ಸಾಬೀತು ಮಾಡಿದೆ ಎಂದರು.
ರಾಜಕೀಯವಾಗಿ ಬಿಜೆಪಿಯನ್ನು ಎದುರಿಸಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಡೆಸಿದ ಷಡ್ಯಂತ್ರ ಬಯಲಾಗಿದೆ. ಯಡಿಯೂರಪ್ಪ ವಿರುದ್ಧ ಸುಳ್ಳು ಆರೋಪ, ಸುಳ್ಳು ಎಫ್‌ಐಆರ್ ಮಾಡಿ ಬಿಜೆಪಿಯನ್ನು ಕಟ್ಟಿ ಹಾಕಲು ಹೊರಟಿದ್ದ ಮುಖ್ಯಮಂತ್ರಿ ಹಾಗೂ ಅವರ ದುಷ್ಟಕೂಟಕ್ಕೆ ತಕ್ಕ ಪಾಠವಿದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ಈ ಕೂಡಲೇ ಯಡಿಯೂರಪ್ಪರ ಕ್ಷಮೆಯಾಚಿಸಬೇಕು, ಅದು ಸಾಧ್ಯವಿಲ್ಲದಿದ್ದರೆ ರಾಜ್ಯದ ಜನತೆಯ ಕ್ಷಮೆಯಾಚಿಸಲಿ. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.