ಗೃಹ ಮಂಡಳಿಯ ಫ್ಲಾಟ್‌ಗಳು ಸುಸಜ್ಜಿತವಾಗಿವೆ: ಸಚಿವ ಎಂ.ಕೃಷ್ಣಪ್ಪ
ಬೆಂಗಳೂರು, ಸೆ.22: ಬೆಂಗಳೂರಿನ ಕೆಂಗೇರಿ ಉಪನಗರ, ಬಂಡೇಮಠ ಹಾಗೂ ಸೂರ್ಯ ನಗರದಲ್ಲಿ ಕರ್ನಾಟಕ ಗೃಹ ಮಂಡಳಿ ಸುಸಜ್ಜಿತವಾದ, ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒಳಗೊಂಡಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ತಿಳಿಸಿದರು.
ಶುಕ್ರವಾರ ಕೆಂಗೇರಿಯ ಉಪನಗರದಲ್ಲಿನ ಕೆಎಚ್‌ಬಿ ಪ್ಲಾಟಿನಂ ಕ್ಲಬ್ ಹೌಸ್‌ನಲ್ಲಿ ಸ್ಥಳದಲ್ಲಿಯೇ ಫ್ಲಾಟ್ ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿ, ಕೆಂಗೇರಿ ಪ್ಲಾಟಿನಂನಲ್ಲಿ 411 ಫ್ಲಾಟ್‌ಗಳು, ಕೆಂಗೇರಿ ಡೈಮಂಡ್‌ನಲ್ಲಿ 206 ಹಾಗೂ ಸೂರ್ಯ ಎಲಿಗೆನ್ಸ್‌ನಲ್ಲಿ 326 ಫ್ಲಾಟ್‌ಗಳು ಹಂಚಿಕೆಗೆ ಲಭ್ಯವಿರುತ್ತದೆ ಎಂದು ತಿಳಿಸಿದರು.
ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಉತ್ತಮ ಗುಣಮಟ್ಟದ ಈ ಫ್ಲಾಟ್‌ಗಳು ನೀರು, ವಿದ್ಯುತ್, ಒಳಚರಂಡಿ ಹಾಗೂ ಸಕಲ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಫ್ಲಾಟ್‌ಗಳನ್ನು ಖರೀದಿಸುವವರಿಗೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಜಾಮೀನನ್ನು ಕರ್ನಾಟಕ ಗೃಹ ಮಂಡಳಿಯೇ ನೀಡುತ್ತದೆ. ಆದ್ದರಿಂದ ಯಾವುದೇ ಬ್ಯಾಂಕ್‌ಗಳು ಸಾಲ ನೀಡಲು ಹಿಂಜರಿಯುವುದಿಲ್ಲ. ತಕ್ಷಣವೇ ಸಾಲ ಮಂಜೂರು ಮಾಡಿ ಕೊಡುಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಸೋಮಶೇಖರ್ ಮಾತನಾಡಿ, ಕೆಂಗೇರಿಯ ಕೆಎಚ್‌ಬಿ ಪ್ಲಾಟಿನಂನಲ್ಲಿ ಪ್ರತಿ ಚದರ ಅಡಿ 3,300 ರೂ., ಕೆಂಗೇರಿಯ ಕೆಎಚ್‌ಬಿ ಡೈಮಂಡ್‌ನಲ್ಲಿ ಪ್ರತಿ ಚದರ ಅಡಿಗೆ 2,800 ರೂ. ಹಾಗೂ ಸೂರ್ಯನಗರದ ಮೊದಲನೆ ಹಂತದ ಫ್ಲಾಟ್‌ಗಳಿಗೆ ಪ್ರತಿಚದರ ಅಡಿಗೆ 2,950 ರೂ.ಗಳಿಗೆ ಲಭ್ಯವಿದೆ. ಕರ್ನಾಟಕ ಗೃಹ ಮಂಡಳಿಯು ನಿರ್ಮಿಸಿರುವ ಉತ್ತಮ ಗುಣಮಟ್ಟದ ಫ್ಲಾಟ್‌ಗಳು ಬೆಂಗಳೂರಿನಲ್ಲಿ ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿರುವುದು ನಿಮ್ಮ ಸೌಭಾಗ್ಯ ಮತ್ತು ಈ ಫ್ಲಾಟ್‌ಗಳಲ್ಲಿ ವಾಸಮಾಡಲು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು, ಕರ್ನಾಟಕ ಗೃಹ ಮಂಡಳಿಯ ನಿರ್ದೇಶಕರುಗಳು, ಕರ್ನಾಟಕ ಗೃಹ ಮಂಡಳಿಯ ಆಯುಕ್ತ ಎ.ಬಿ. ಇಬ್ರಾಹೀಂ, ಹಾಗೂ ಮುಖ್ಯ ಅಭಿಯಂತರ ಗಣೇಶ್ ಮತ್ತು ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.