×
Ad

ಬಾಡಿಗೆ ಆಧಾರದಲ್ಲಿ 1500 ಖಾಸಗಿ ಬಸ್ಸುಗಳ ಸೇವೆ: ಎಚ್.ಎಂ.ರೇವಣ್ಣ

Update: 2017-09-22 20:28 IST

ಬೆಂಗಳೂರು, ಸೆ.22: ಬೆಂಗಳೂರಿನಲ್ಲಿ ಸಾರಿಗೆ ಬಸ್ ಗಳ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 1500 ಖಾಸಗಿ ಬಸ್ ಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿಗೆ ಹೊಸದಾಗಿ 1500 ಬಸ್ ಗಳನ್ನು ಖರೀದಿಸುವುದರ ಜೊತೆಗೆ, 1500 ಬಸ್ ಗಳನ್ನು ಖಾಸಗಿಯವರಿಂದ ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಈ ಸಂಬಂಧ ಶೀಘ್ರವೇ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.

ಬಾಡಿಗೆ ಆಧಾರದಲ್ಲಿ ಪಡೆಯಲಿರುವ ಬಸ್ ಗಳಲ್ಲಿಯೂ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರು ಕಾರ್ಯನಿರ್ವಾಹಕರೆ ಕರ್ತವ್ಯ ನಿರ್ವಹಿಸುತ್ತಾರೆ. ಇಲಾಖೆಯ ಕೆಲಸ ಕಾರ್ಯಗಳು ಸುಗಮವಾಗಿ ಸಾಗಿಸಲು ಸಂಬಂಧಪಟ್ಟವರಿಗೆ ಸಾರಿಗೆ ತರಬೇತಿ ಕಾರ್ಯಾಗಾರ ನೀಡಲು ಒತ್ತು ನೀಡಲಾಗುವುದು ಎಂದು ರೇವಣ್ಣ ಹೇಳಿದರು.

ಬಸ್ ಡಿಪೋಗಳಲ್ಲಿ ಹಲವಾರು ವರ್ಷಗಳಿಂದ ಹಾಗೆ ಉಳಿದಿರುವ ಅನುಪಯುಕ್ತ ವಸ್ತು(ಸ್ಕ್ರಾಪ್)ಗಳನ್ನು ವಿಲೇವಾರಿ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ವಾಹನಗಳಿಗೆ ಮಾಡಲಾಗುವ ವಾಯು ಮಾಲಿನ್ಯ ಪರೀಕ್ಷೆ(ಎಮಿಷನ್ ಟೆಸ್ಟ್)ಯಲ್ಲಿ ಆಗುತ್ತಿರುವ ಅಕ್ರಮಗಳು ನನ್ನ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News