‘ವಾರ್ತಾಭಾರತಿ’ ವಿರುದ್ಧದ ಶೋಕಾಸ್ ನೋಟಿಸ್ ಗೆ ಹೈಕೋರ್ಟ್ ತಡೆ

Update: 2017-09-22 15:20 GMT

ಬೆಂಗಳೂರು, ಸೆ.22: ಸುದ್ದಿಯೊಂದಕ್ಕೆ ಸಂಬಂಧಿಸಿ ‘ವಾರ್ತಾ ಭಾರತಿ’ ಪತ್ರಿಕೆಯ ವಿರುದ್ಧ ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ತಡೆ ನೀಡಿದೆ.

ಈ ಸಂಬಂಧ ಶೋಕಾಸ್ ನೋಟಿಸ್ ರದ್ದು ಕೋರಿ ‘ವಾರ್ತಾ ಭಾರತಿ’ ಪ್ರಧಾನ ಸಂಪಾದಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠವು ಶೋಕಾಸ್ ನೋಟಿಸ್‌ಗೆ ತಡೆ ನೀಡಿ,  ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ, ಸಂವಿಧಾನ ತಜ್ಞ ಪ್ರೊ.ರವಿವರ್ಮಕುಮಾರ್ ಅವರು, ವಾರ್ತಾ ಭಾರತಿ ಪತ್ರಿಕೆಯು ಯಾವುದೇ ಕೋಮುಭಾವನೆ ಸೃಷ್ಟಿಸುವಂತಹ  ಸುದ್ದಿಯನ್ನು ಪ್ರಕಟಿಸಿಲ್ಲ. ಆದರೂ ಮಂಗಳೂರು ಕಂದಾಯ ಇಲಾಖೆಯ ಉಪ ವಿಭಾಗ ಸಹಾಯಕ ಆಯುಕ್ತರು, ದಿ ಪ್ರೆಸ್ ಆ್ಯಂಡ್ ರಿಜಿಸ್ಟ್ರೇಷನ್ ಆಫ್ ಬುಕ್ಸ್ ಆ್ಯಕ್ಟ್ 1867ರ ಕಲಂ 14 ಮತ್ತು 15ಕಲಂ 8(ಬಿ) ಅಡಿ ಪತ್ರಿಕೆಯ ಮುದ್ರಣ ಮತ್ತು ಪ್ರಚಾರಕ್ಕಾಗಿ ನೀಡಲಾದ ಅನುಮತಿಯನ್ನು ವಜಾ ಮಾಡಿ, ಪತ್ರಿಕೆಯ ಪರವಾನಿಗೆಯನ್ನು ರದ್ದುಪಡಿಸಲು ಶಿಫಾರಸ್ಸು ಮಾಡಬಾರದೇಕೆ ಎಂದು ಪ್ರಶ್ನಿಸಿ ಪತ್ರಿಕೆಗೆ ನೋಟಿಸ್ ನೀಡಿದ್ದಾರೆ. ಆದರೆ, ಆ್ಯಕ್ಟ್ 1867ರ ಕಲಂ 14 ಮತ್ತು 15ಕಲಂ 8(ಬಿ) ವ್ಯಾಪ್ತಿಯಲ್ಲಿ ನೋಟಿಸ್ ನೀಡಲು ಬರುವುದಿಲ್ಲ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಹಿರಿಯ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ತಡೆ ನೀಡಿದರು. ಅಲ್ಲದೆ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದರು.

ವಿವರ: ಬಂಟ್ವಾಳದಲ್ಲಿ ಕೊಲೆ ಪ್ರಕರಣದ ಆರೋಪಿಯೊಬ್ಬನ ಮನೆಗೆ ಪೊಲೀಸರ ತಂಡ ದಾಳಿ ನಡೆಸಿದ್ದಾಗ ಕುರ್ ಆನ್ ಗ್ರಂಥವನ್ನು ಎಸೆದು ಮದ್ರಸ ಪುಸ್ತಕಗಳನ್ನು ಹರಿದು ಹಾಕಿದ್ದಾರೆ ಎಂಬ ಮನೆಯವರ ಹೇಳಿಕೆಯನ್ನು 'ವಾರ್ತಾ ಭಾರತಿ' ದಿನ ಪತ್ರಿಕೆಯು ಸೆ.3ರಂದು ಪ್ರಕಟಿಸಿತ್ತು. ಆರೋಪವನ್ನು ನಿರಾಕರಿಸಿದ್ದ ಜಿಲ್ಲಾ ಎಸ್ಪಿಯವರ ಹೇಳಿಕೆಯನ್ನು ಸೆ.4ರಂದು ಪ್ರಕಟಿಸಿತ್ತು. ಆದರೆ ಪತ್ರಿಕೆಯ ವರದಿಗಾರ ಹಾಗು ಪ್ರಧಾನ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿದ ಬಂಟ್ವಾಳ ಪೊಲೀಸರು ವರದಿಗಾರನನ್ನು ಬಂಧಿಸಿದರು. ಅಷ್ಟಕ್ಕೆ ತೃಪ್ತರಾಗದೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ನೇತೃತ್ವದ ವಿಶೇಷ ಘಟಕದ ಪೊಲೀಸ್ ಉಪ ನಿರೀಕ್ಷಕರು ಇದು ಸುಳ್ಳು ಸುದ್ದಿಯಾಗಿದ್ದು, ಪತ್ರಿಕೆಯ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದೆಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ರಿಕೆಯ ವಿರುದ್ಧ  ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತರು ಶೋಕಾಸ್ ನೋಟಿಸ್ ನೀಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News