×
Ad

ಜನಪ್ರಿಯತೆಗಾಗಿ ‘ಅಕ್ರಮ-ಸಕ್ರಮ’ಕ್ಕೆ ಮುಂದಾದ ಸರಕಾರ: ಎಚ್.ಡಿ.ದೇವೇಗೌಡ

Update: 2017-09-22 21:06 IST

ಬೆಂಗಳೂರು, ಸೆ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಜನಪ್ರಿಯತೆ ಗಳಿಸಲು ಬೆಂಗಳೂರಿನಲ್ಲಿ ತರಾತುರಿಯಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯಲ್ಲಿ ಮಾತನಾಡಿದ ಅವರು, ಅಕ್ರಮ-ಸಕ್ರಮವನ್ನು ತರಾತುರಿಯಲ್ಲಿ ಜಾರಿಗೆ ತರುವುದರಿಂದ ಸಾಕಷ್ಟು ಮಂದಿಗೆ ಮೋಸ, ತೊಂದರೆ ಆಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಏನು ಆಗುತ್ತಿದೆ ಅಂತ ನನಗೂ ಗೊತ್ತಿದೆ. ಕುಮಾರಸ್ವಾಮಿಗೂ ಮಾಹಿತಿ ಇದೆ. ಅಕ್ರಮ ಸಕ್ರಮದ ತನಿಖಾಧಿಕಾರಿಗಳು ಗಟ್ಟಿಯಾಗಿ ನಿಲ್ಲದಿದ್ದರೆ ಕಷ್ಟವಾಗುತ್ತದೆ. ಇದಕ್ಕೆ ಉದಾಹರಣೆ ಅಂದರೆ, ಹೇರೋಹಳ್ಳಿ ವಾರ್ಡ್‌ನ ಲಿಂಗಧೀರನ ಹಳ್ಳಿಯಲ್ಲಿ ಆಗಿರುವ ಭೂ ಅಕ್ರಮ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಸರಕಾರದ ‘ಡಿ’ ಗ್ರೂಪ್ ನೌಕರರಿಗಾಗಿ ಮಾತ್ರವೆ ಇಲ್ಲಿ ರೈತರಿಂದ ಭೂಮಿ ಪಡೆದು ಬಡಾವಣೆ ನಿರ್ಮಿಸಿ ಸೈಟ್‌ಗಳನ್ನು ನೀಡಲು ತೀರ್ಮಾನ ಮಾಡಿದ್ದರು. ಆದರೆ, ಅವರು ಅಧಿಕಾರ ಕಳೆದುಕೊಂಡ ಮೇಲೆ ಇಲ್ಲಿ ಸಾಕಷ್ಟು ಅಕ್ರಮ ಆಗಿದೆ. ನನ್ನ ವಾಹನದ ಚಾಲಕ ವಸಂತ್ ದುಡ್ಡು ಕಟ್ಟಿದ್ದರೂ ಇಲ್ಲಿ ನಿವೇಶನ ಸಿಕ್ಕಿಲ್ಲ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಡಿ’ ಗ್ರೂಪ್ ನೌಕರರ ಜತೆ ಬೇರೆಯವರಿಗೂ ಇಲ್ಲಿ ನಿವೇಶನ ನೀಡಲಾಗಿದೆ. ಇದೀಗ 2.10 ಎಕರೆ ಉದ್ಯಾನವನದ ಜಾಗವನ್ನೂ ಅಕ್ರಮ ಮಾಡಿಕೊಂಡು ಮನೆಗಳನ್ನು ಕಟ್ಟುತ್ತಿದ್ದಾರೆ. ಮುಂದೆ ಅಕ್ರಮ ಸಕ್ರಮದ ಹೆಸರಿನಲ್ಲಿ ಇದೂ ಸಕ್ರಮವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಾನೂ ಈಗ ಸ್ಥಳ ಪರಿಶೀಲನೆ ಮಾಡಿದ್ದೇನೆ. ಸ್ಥಳೀಯ ರಾಜಕಾರಣಿಗಳ ಪ್ರಭಾವ ಇಲ್ಲದೆ ಇದೆಲ್ಲ ನಡೆಯಲ್ಲ ಎಂದು ಪರೋಕ್ಷವಾಗಿ ಸ್ಥಳೀಯ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ದೇವೇಗೌಡ ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೆ ತಂದದ್ದೆ ನಾನು. ಇಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲವೇ? ಒಟ್ಟಿನಲ್ಲಿ ‘ಡಿ’ ಗ್ರೂಪ್ ನೌಕರರಿಗೆ ಅನ್ಯಾಯ ಆಗದಂತೆ ಸರಕಾರ ನೋಡಿಕೊಳ್ಳಬೇಕು ಅಷ್ಟೇ ಎಂದು ಅವರು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿಗೆ ಶಸ್ತ್ರಚಿಕಿತ್ಸೆ: ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುವುದಾಗಿ ಕುಮಾರಸ್ವಾಮಿ ಖುದ್ದು ಹೇಳಿಕೊಂಡಿದ್ದಾರೆ. 10 ವರ್ಷದ ಹಳೆಯ ಹೃದಯನಾಳದ ವಾಲ್ವ್ ಅನ್ನು ಬದಲಾವಣೆ ಮಾಡುತ್ತಾರೆ ಅಷ್ಟೇ. ಇದರಿಂದ ದೊಡ್ಡ ತೊಂದರೆ ಏನು ಆಗುವುದಿಲ್ಲ. ಶನಿವಾರ ಈ ಸಂಬಂಧ ಅವರು ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. ಆದರೆ, ಜ್ವರವಿದ್ದರೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಬೇಕಾಗುತ್ತದೆ. ನಿನ್ನೆ ರಾತ್ರಿ ಕುಮಾರಸ್ವಾಮಿಗೆ ಜ್ವರ ಇತ್ತು. ಬೆಳಗ್ಗೆಯಿಂದ ಕಡಿಮೆ ಆಗಿದೆ. ಹಾಗಾಗಿ, ಶನಿವಾರ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆಯಿದೆ ಎಂದು ದೇವೇಗೌಡ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News