ಈಶ್ವರಪ್ಪ ಪಿಎ ಅಪಹರಣ ಪ್ರಕರಣ: ಬಿ.ಎಸ್.ಯಡಿಯೂರಪ್ಪಗೆ ನೋಟಿಸ್

Update: 2017-09-22 15:42 GMT

ಬೆಂಗಳೂರು, ಸೆ.22: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ, ಹಲ್ಲೆ ಪ್ರಕರಣ ಸಂಬಂಧ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಸೆ.28 ಗುರುವಾರ ಬೆಳಗ್ಗೆ 10:30 ಸುಮಾರಿಗೆ ನಗರದ ಮಲ್ಲೇಶ್ವರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ 1ನೆ ಮಹಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಸಿಪಿ ಎ.ಆರ್.ಬಡಿಗೇರ್ ನೋಟಿಸ್ ಕಳುಹಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್‌ ಕಾಲನಿಯ ಆರ್‌ಎಂವಿ 2ನೇ ಹಂತದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರ ಸ್ವಗೃಹಕ್ಕೆ ಪೊಲೀಸರು ನೋಟಿಸ್ ಕಳುಹಿಸಿದ್ದು, 149 ಐಪಿಸಿ ಅನ್ವಯ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದೆ.

ಈ ಸಂಬಂಧ ಸಂತೋಷ್ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಲಂ 143, 232, 325, 363, 511, 331, 120(ಬಿ) ಅಡಿ ಮೊಕದ್ದಮೆ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News