ಮಕ್ಕಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್

Update: 2017-09-22 17:26 GMT

ಬೆಂಗಳೂರು, ಸೆ.22: ತನ್ನ ಇಬ್ಬರು ಮಕ್ಕಳನ್ನೇ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಮೇಶ್ ನಾಯಕ್‌ಗೆ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿ ಆದೇಶಿಸಿದೆ.

ಮಂಗಳೂರು ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದಲ್ಲಿ ತನ್ನ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದ ಪ್ರಕರಣ ಸಂಬಂಧ ರಮೇಶ್ ನಾಯಕ್‌ಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ರಮೇಶ್ ನಾಯಕ್ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.

2010ರ ಜೂನ್ 16ರಂದು ಮಂಗಳೂರು ಜಿಲ್ಲೆಯ ಪಾಣಾಜೆ ಗ್ರಾಮದ ಕೆರೆಯಲ್ಲಿ ಆರೋಪಿ ರಮೇಶ್ ನಾಯಕ್‌ ತನ್ನ ಮಕ್ಕಳಾದ ಕೃತಿಕಾ ಮತ್ತು ಭುವನ್‌ರಾಜ್‌ರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದು, ಈ ಸಂಬಂಧ ಪುತ್ತೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದರು. ತನಿಖೆಯಿಂದ ಅಪರಾಧಿಯೇ ಮಕ್ಕಳನ್ನು ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ, ಪುತ್ತೂರು ನ್ಯಾಯಾಲಯವು ಆರೋಪಿ ರಮೇಶ್ ನಾಯಕ್‌ಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿತ್ತು.

ಆರೋಪಿ ರಮೇಶ್ ನಾಯಕ್, ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದನು. ಆದರೆ, ಹೈಕೋರ್ಟ್ ವಿಭಾಗೀಯ ಪೀಠವು ಅಪರಾಧಿ ತನ್ನ ಮಕ್ಕಳನ್ನು ಹತ್ಯೆ ಮಾಡುವ ಒಂದು ದಿನ ಮೊದಲು ಪತ್ನಿಯ ತಾಯಿ ಹಾಗೂ ನಾದಿನಿಯನ್ನು ಹತ್ಯೆಗೈದಿದ್ದಾನೆ ಎಂದು ಅಭಿಪ್ರಾಯಿಸಿ ಆರೋಪಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿತು.

ಸರಕಾರದ ಪರ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ವಿಜಯಕುಮಾರ ಮಜಗೆ ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News