ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಕಗ್ಗೊಲೆ: ಇರೋಮ್ ಶರ್ಮಿಳಾ

Update: 2017-09-22 16:42 GMT

ಬೆಂಗಳೂರು, ಸೆ. 22: ದೇಶದಲ್ಲಿ ಸದ್ಯದ ಪರಿಸ್ಥಿತಿ ಬಹಳ ಅಪಾಯಕಾರಿ. ಭಿನ್ನಮತೀಯ ಧ್ವನಿಯನ್ನು ಹತ್ತಿಕ್ಕಲು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಕಗ್ಗೊಲೆ ಯಾಗುತ್ತಿದೆ ಎಂದು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಹೇಳಿದ್ದಾರೆ.

ಶುಕ್ರವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ವಕೀಲ ಸಮುದಾಯ ಆಯೋಜಿಸಿದ್ದ ‘ಭಿನ್ನಮತದ ವಿರೋಧಿ ವಿರುದ್ಧ ಧ್ವನಿ’(ವಾಯ್ಸ ಆಗೈನ್ಸ್ಟ್ ಸೈಲೆಂಸಿಂಗ್ ಡಿಸೆಂಟ್) ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರ ಪಕ್ಷೇತರ ಸಂಘಟನೆ ಕೈವಶದಲ್ಲಿರುವುದರಿಂದ ದೇಶದಲ್ಲಿ ನಿರ್ಭೀತಿಯಿಂದ ಮಾತನಾಡುವ, ಬರೆಯುವ ವ್ಯಕ್ತಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ದೇಶ ಯಾವ ಕಡೆ ಸಾಗುತ್ತಿದೆ ಎಂಬ ಭಯ ಜನರನ್ನು ಕಾಡುತ್ತಿದೆ. ದೇಶದಲ್ಲಿ ಸದ್ಯದ ಪರಿಸ್ಥಿತಿ ಬಹಳ ಅಪಾಯಕಾರಿ ಎಂದು ಹೇಳಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸುರಕ್ಷಿತ ಭಾರತ ನಿರ್ಮಾಣಕ್ಕೆ ಪಣ ತೋಡಬೇಕಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ನಿರ್ಭೀತಿಯಿಂದ ಬರೆಯುವ ಪತ್ರಕರ್ತರ ರಕ್ಷಣೆ ಸಮಾಜದ ಮೇಲಿದೆ ಎಂದು ಹೇಳಿದರು.

ನಾನು, ನನ್ನ ಗಂಡ ಕೂಡ ಗೌರಿ: ಪತ್ರಕರ್ತೆ ಗೌರಿ ಹತ್ಯೆ ಖಂಡನೀಯ. ಅಭಿವ್ಯಕ್ತಿ ಸ್ವಾತಂತ್ರವನ್ನು ಒಪ್ಪದವರಿಂದ ನಡೆದಿರುವ ಹೇಯ ಕೃತ್ಯವಿದು. ಒಬ್ಬ ಗೌರಿಯನ್ನು ಕೊಲೆ ಮಾಡುವ ಮೂಲಕ ಲಕ್ಷಾಂತರ ಗೌರಿಯರನ್ನು ಹುಟ್ಟುಹಾಕಿದ್ದಾರೆ. ನಾನು, ನನ್ನ ಗಂಡ ಕೂಡ ಗೌರಿ ಎಂದರು.

ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಪತ್ರಕರ್ತೆ ಗೌರಿ ಲಂಕೇಶ್ ಯಾರ ಜೇಬಿಗೂ ಕೈ ಹಾಕಿದವಳಲ್ಲ, ಯಾರನ್ನು ವಂಚಿಸಿದಳಲ್ಲ. ಯಾವುದೇ ಕಾರಣಕ್ಕೂ ಆಸ್ತಿಯ ವಿಚಾರವಾಗಿ ಹತ್ಯೆ ಆಗಿಲ್ಲ. ಗೌರಿ ಅಭಿವ್ಯಕ್ತಿ ಸ್ವಾತಂತ್ರದ ಪ್ರತಿರೂಪ. ಕಣ್ಣಿಗೆ ಕಾಣದ ಸತ್ಯವನ್ನು ನಿರ್ಭೀತಿಯಿಂದ ಹೇಳುತ್ತಿದ್ದಳು. ಅವಳ ಬಾಯಲ್ಲಿ ಮೊದಲಿಗೆ ಬರುತ್ತಿದ್ದದ್ದೇ ಸೌಹಾರ್ದದ ಮಾತುಗಳು. ಅಭಿವ್ಯಕ್ತಿ ಸ್ವಾತಂತ್ರವನ್ನು ಹೆಚ್ಚಾಗಿ ಸಂಭ್ರಮಿಸಿದ ಪರಿಣಾಮ ದುಷ್ಕರ್ಮಿಗಳ ಗುಂಡಿಗೆ ಬಲಿಯಾದಳು ಎಂದು ಹೇಳಿದರು.

ದೇಶದಲ್ಲಿ ಅನಾಗರಿಕ, ಹೇಯ, ಹಿಂಸೆ, ಅಸಹಿಷ್ಣುತೆಯ ಸಂಸ್ಕೃತಿ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ತಾನು ಮಹಿಳೆ ಎನ್ನುವ ವಿಚಾರವನ್ನು ಪಕ್ಕಕ್ಕಿಟ್ಟು, ಪುರುಷರೊಂದಿಗೆ, ದಲಿತರ, ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಚಳವಳಿಗಳಲ್ಲಿ ಹೆಗಲಿಗೆ ಹೆಗಲಾಗಿದ್ದಳು. ಇಂದು ಬಾಬಾ ಬುಡನ್‌ಗಿರಿ ಕೇಸರಿಕರಣ ಆಗದೇ ಉಳಿದಿದೆ ಎಂದರೆ ಆಕೆಯ ದಿಟ್ಟ ಹೋರಾಟದಿಂದ ಮಾತ್ರ ಎಂದು ತಿಳಿಸಿದರು.

ಗಾಂಧೀ ಅವರನ್ನು ಹತ್ಯೆ ಮಾಡಿದ ಕೈಗಳೇ ಇಂದು ಗೋರಕ್ಷಣೆ ಹೆಸರಿನಲ್ಲಿ ದಲಿತ, ಮುಸ್ಲಿಮರನ್ನು ಕೊಲೆ ಮಾಡುತ್ತಿವೆ. ಗಾಂಧಿ ಹತ್ಯೆಯಲ್ಲಿ ಕೈವಾಡ ಸೇರಿದಂತೆ ಆರೆಸ್ಸೆಸ್ ಇದುವರೆಗೂ ಮೂರು ಬಾರಿ ನಿಷೇಧಕ್ಕೆ ಒಳಗಾಗಿದೆ. ಆರೆಸೆಸ್ ತಮ್ಮ ಮೇಲೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ಎಂದಿಗೂ ಕೋರ್ಟ್‌ಗೆ ಮೊರೆ ಹೋಗಿಲ್ಲ. ಆದರೆ ಸೂಕ್ತ ಸಮಯಕ್ಕಾಗಿ ಕಾದು ಮತ್ತೆ ತನ್ನ ವಿಸ್ತಾರವನ್ನು ಹೆಮ್ಮರದಂತೆ ಹಬ್ಬಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿಪಿಐನ ಕೇಂದ್ರ ಸಮಿತಿಯ ಸದಸ್ಯ ಡಾ.ಸಿದ್ದನಗೌಡ ಪಾಟೀಲ್, ಪ್ರೊ. ಕಲ್ಪನಾ ಕಣ್ಣಬಿರಾನ್, ವಕೀಲರಾದ ಬಿ.ಟಿ.ವೆಂಕಟೇಶ್, ಸುರೇಶ್, ಎಲ್.ಶ್ರೀನಿವಾಸ್ ಬಾಬು, ಮಂಜುನಾಥ್ ಗುಬ್ಬಿ, ಅನಂತ್ ನಾಯ್ಕಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News