​ಉತ್ತರ ಕೊರಿಯಾ ಕರಾವಳಿಯಲ್ಲಿ ಅಮೆರಿಕ ಬಲಪ್ರದರ್ಶನ

Update: 2017-09-24 03:39 GMT

ವಾಷಿಂಗ್ಟನ್, ಸೆ. 24: ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಸರಣಿ ಕ್ಷಿಪಣಿ ಪರೀಕ್ಷೆ ವಿರುದ್ಧ ಭುಸುಗುಟ್ಟುತ್ತಿರುವ ಅಮೆರಿಕ ಶನಿವಾರ, ಉತ್ತರ ಕೊರಿಯಾದ ಪೂರ್ವ ಕರಾವಳಿಯ ಅಂತಾರಾಷ್ಟ್ರೀಯ ವಾಯು ಸ್ಥಳದಲ್ಲಿ ತನ್ನ ಬಲಪ್ರದರ್ಶನ ಮಾಡುವ ಮೂಲಕ ರಣಕಹಳೆ ಮೊಳಗಿಸಿದೆ.

ಅಮೆರಿಕ ವಾಯುಪಡೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ ಹಾಗೂ ಫೈಟರ್ ಜೆಟ್‌ಗಳು ಹಾರಾಟ ನಡೆಸಿದವು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರುವ ಮಿಲಿಟರಿ ಆಯ್ಕೆಗಳ ಬಗ್ಗೆ ಪ್ರದರ್ಶನ ನೀಡಲಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ.

ಉತ್ತರ ಕೊರಿಯಾದ ವಿದೇಶಾಂಗ ಸಚಿವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ  ಮಾತನಾಡುವ ಕೆಲವೇ ನಿಮಿಷಗಳ ಮೊದಲು ಈ ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ನಡೆದಿದೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾವನ್ನು ಪ್ರತ್ಯೇಕಿಸುವ ಮಿಲಿಟರಿಮುಕ್ತ ವಲಯದಲ್ಲಿ ಈ ಹಾರಾಟ ನಡೆದಿದ್ದು, 21ನೆ ಶತಮಾನದಲ್ಲಿ ಅಮೆರಿಕ ಯುದ್ಧ ವಿಮಾನಗಳು ಇಲ್ಲಿ ಹಾರಾಡುತ್ತಿರುವುದು ಇದೇ ಮೊದಲು.

"ಯಾವುದೇ ಅಪಾಯವನ್ನು ಸೋಲಿಸಲು ಅಧ್ಯಕ್ಷರಿಗೆ ಇರುವ ಮಿಲಿಟರಿ ಆಯ್ಕೆಗಳು ಏನೇನು ಎಂಬ ಸಂದೇಶವನ್ನು ಈ ಪ್ರದರ್ಶನ ರವಾನಿಸುತ್ತದೆ" ಎಂದು ವಕ್ತಾರೆ ಡಾನಾ ವೈಟ್ ಹೇಳಿದ್ದಾರೆ. "ನಮ್ಮ ಹಾಗೂ ನಮ್ಮ ಮಿತ್ರ ದೇಶಗಳ ತವರು ಭೂಮಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಂಪೂರ್ಣ ಮಿಲಿಟರಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಸಿದ್ಧ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News