ರಾಜ್ಯ ಸರಕಾರಕ್ಕೆ ಖಮರುಲ್ ಇಸ್ಲಾಮ್ ಪತ್ನಿ ಕೃತಜ್ಞತೆ ಸಲ್ಲಿಕೆ
ಬೆಂಗಳೂರು, ಸೆ.24: ರಾಜ್ಯ ಸರಕಾರಕ್ಕೆ ಹಾಗೂ ಕಲಬುರಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಾ.ಖಮರುಲ್ ಇಸ್ಲಾಮ್ ಅವರ ಪತ್ನಿ ಕನೀಝ್ ಫಾತಿಮಾ ಕೃತಜ್ಞತೆ ಸಲ್ಲಿಸಿದ್ದಾರೆ.
ಖಮರುಲ್ ಇಸ್ಲಾಮ್ ಅಕಾಲಿಕ ನಿಧನ ನಮ್ಮ ಕುಟುಂಬವನ್ನು ಶೋಕ ಸಾಗರದಲ್ಲಿ ತಳ್ಳಿದೆ. ಈ ದುಃಖದಿಂದ ಹೊರಬರಲು ನಮಗೆ ಇನ್ನು ಎಷ್ಟು ಕಾಲಾವಕಾಶ ಬೇಕೋ ಗೊತ್ತಿಲ್ಲ. ನಮ್ಮ ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ನೀವು ನಮ್ಮಿಂದಿಗೆ ಇದ್ದು ಧೈರ್ಯ ತುಂಬಿದಕ್ಕೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ಯಾವುದೆ ರೀತಿಯ ಗೊಂದಲ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ, ಸಂಪ್ರದಾಯ ಹಾಗೂ ಸಕಲ ಸರಕಾರಿ ಗೌರವಗಳೊಂದಿಗೆ ನನ್ನ ಪತಿಯ ಅಂತ್ಯಸಂಸ್ಕಾರ ನೆರವೇರಲು ಮುತುವರ್ಜಿ ವಹಿಸಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳು ಎಂದು ನುಡಿದಿದ್ದಾರೆ.
ಕಲಬುರಗಿ ಜನರು ನನ್ನ ಪತಿಯ ಮೇಲೆ ಇಟ್ಟಿದ್ದ ಅಭಿಮಾನ, ಗೌರವದ ಸಾಕ್ಷಾತ್ ದರ್ಶನ ನಮಗೆ ಆಗಿದೆ. ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿ ಅವರ ಅಂತಿಮ ದರ್ಶನ ಪಡೆದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಜನತೆಯ ಪ್ರೀತಿ, ಅಭಿಮಾನವನ್ನು ವರ್ಣಿಸಲು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ವಿಶ್ವಾಸ ಇದೇ ರೀತಿ ಮುಂದೆಯೂ ನಮ್ಮ ಕುಟುಂಬದ ಮೇಲಿರಲಿ, ಸರ್ವಶಕ್ತನಾದ ದೇವರು ತಮ್ಮನ್ನು ಅನುಗ್ರಹಿಸಲಿ ಎಂದು ಕನೀಝ್ ಫಾತಿಮಾ ಪ್ರಕಟನೆಯಲ್ಲಿ ಪ್ರಾರ್ಥಿಸಿದ್ದಾರೆ.