×
Ad

‘ಮೀಟರ್’ ಪದ ಬಳಸಿ ಸಣ್ಣವರಾದ ಸಿದ್ದರಾಮಯ್ಯ: ಸುರೇಶ್‌ ಕುಮಾರ್

Update: 2017-09-24 18:29 IST

ಬೆಂಗಳೂರು, ಸೆ. 24: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷವನ್ನು ಟೀಕಿಸುವ ಅವಸರದಲ್ಲಿ ‘ಯಡಿಯೂರಪ್ಪರಿಗೆ ಮೀಟರ್ ಇದೆಯೇ’ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಜನತೆಯ ಮುಂದೆ ಸಣ್ಣವರಾಗಿದ್ದಾರೆಂದು ಬಿಜೆಪಿ ವಕ್ತಾರ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಟರ್ ಪದವನ್ನು ಬಳಸಬಾರದಾಗಿತ್ತು. ಅದು ಸಾಮಾನ್ಯವಾಗಿ ಭೂಗತ ಜಗತ್ತಿನಲ್ಲಿ, ರೌಡಿಗಳು ಬಳಸುವ ಪದವಾಗಿದೆ. ಅಂತಹ ಅವಾಚ್ಯ ಪದವನ್ನು ಮಾಜಿ ಸಿಎಂ ಬಿಎಸ್‌ವೈಗೆ ಬಳಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಶಾಸಕರಾಗುವ ಮುನ್ನವೇ ಶಿಕಾರಿಪುರದಲ್ಲಿ ಜೀತದಾಳುಗಳ ಸಮಸ್ಯೆ ವಿರುದ್ಧ ಪರಿಣಾಮಕಾರಿ ಹೋರಾಟ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಆ ಭಾಗದ ಶಾಸಕ ಬೆಂಬಲಿಗರು ಯಡಿಯೂಪ್ಪರ ತಲೆಗೆ ಒಡೆದು ಗಾಯಗೊಳಿಸಿದರು. ಆದರೂ ಹೋರಾಟ ಕೈ ಬಿಡದೆ ಜೀತದಾಳುಗಳ ಸಮಸ್ಯೆಯನ್ನು ತಾರ್ಕಿಕ ಅಂತ್ಯಗಾಣಿಸುವ ಮೂಲಕ ತಮ್ಮ ಮೀಟರ್‌ನ್ನು ರುಜುವಾತು ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.

ಯಡಿಯೂರಪ್ಪ 1985-89ರ ಅವಧಿಯಲ್ಲಿ ಇಡೀ ಶಾಸನಸಭೆಯಲ್ಲಿ ಬಿಜೆಪಿಯ ಒಬ್ಬರೇ ಶಾಸಕರಾಗಿದ್ದಾಗ, ಅಂದಿನ ಅರಣ್ಯ ಸಚಿವ ರಾಚಯ್ಯ ಒಂದು ವಿಧೇಯಕ ತಂದಾಗ ಅದರಿಂದಾಗುವ ದೂರಗಾಮಿ ಪರಿಣಾಮಗಳನ್ನು ವಿವರಿಸಿ, ವಿಧೇಯಕದ ವಿರುದ್ಧ ಯಡಿಯೂರಪ್ಪ ಏಕಾಂಗಿ ಹೋರಾಟ ಹಮ್ಮಿಕೊಂಡು ತಮ್ಮ ಮೀಟರ್‌ನ್ನು ತೋರಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಟರ್ ಪದ ಬಳಕೆ ಮಾಡಬಾರದಾಗಿತ್ತು ಎಂದು ಸುರೇಶ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ವಿಷಾದಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಮೀಟರ್ ಇಲ್ಲವೆಂದು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮೀಟರ್ ಇದೆಯೇ? ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಬಳಿ ಕಾಲಾವಕಾಶಕ್ಕಾಗಿ ಎಷ್ಟು ಸಮಯ ವ್ಯಯ ಮಾಡಿದರು ಎಂಬುದು ಗೊತ್ತಿದೆ.
-ಸುರೇಶ್ ಕುಮಾರ್ ಬಿಜೆಪಿ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News