ಸೆ.27ರಂದು ‘ಡೈಲಿ ಪಾಸ್ಬಾನ್’ ಪತ್ರಿಕೆಯ 71ನೆ ವಾರ್ಷಿಕೋತ್ಸವ
ಬೆಂಗಳೂರು, ಸೆ. 24: ಡೈಲಿ ಪಾಸ್ಬಾನ್ ಪತ್ರಿಕೆಯ 71ನೆ ವಾರ್ಷಿಕೋತ್ಸವ ಹಾಗೂ 70ನೆ ಸ್ವಾತಂತ್ರೋತ್ಸವ ಸಮಾರಂಭವನ್ನು ಸೆ.27ರಂದು ಸಂಜೆ 6ಕ್ಕೆ ಶಿವಾಜಿನಗರದ ಶಮ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಪಾಸ್ಬಾನ್ ಪತ್ರಿಕೆಯ ಪ್ರಧಾನ ಸಂಪಾದಕ ಮುಹಮ್ಮದ್ ಉಬೇದುಲ್ಲಾ ಶರೀಫ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಸ್ಬಾನ್ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದು, ವೆಬ್‌ಸೈಟ್‌ಗೆ ಸಂಸದ ಡಾ.ಎಂ.ವೀರಪ್ಪಮೊಯ್ಲಿ, ಇ-ಪತ್ರಿಕೆಗೆ ಸಚಿವ ರೋಷನ್‌ಬೇಗ್ ಚಾಲನೆ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಾಲಾರ್ ಪಬ್ಲಿಕೇಷನ್‌ಟ್ರಸ್ಟ್ ಅಧ್ಯಕ್ಷ ಡಾ.ಕೆ.ರಹ್ಮಾನ್‌ಖಾನ್ ವಹಿಸಲಿದ್ದಾರೆ ಎಂದರು.
ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹನೀಯರ ತ್ಯಾಗ, ಬಲಿದಾನ, ಉರ್ದು ಭಾಷೆ ಹಾಗೂ ಪತ್ರಿಕೋದ್ಯಮದ ಕೊಡುಗೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ವಿಶೇಷ ಸಂಚಿಕೆಯಲ್ಲಿ ಮಾಡಲಾಗಿದೆ. ಜೊತೆಗೆ, ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರ ಬಗ್ಗೆಯೂ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಅಜ್ಮೀರ್‌ನ ಹಝ್ರತ್ ಖ್ವಾಜಾ ಘರೀಬ್ ನವಾಝ್ ಚಿಸ್ತಿ ದರ್ಗಾದ ಸಜ್ಜಾದ ನಶೀನ್ ಹಝ್ರತ್ ದಿವಾನ್ ಸೈಯ್ಯದ್ ಝೈನುಲ್ ಆಬಿದೀನ್ ವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಗಳನ್ನು ಹಿರಿಯ ಪತ್ರಕರ್ತ ಡಾ.ಅಝೀಝ್ ಬರ್ನಿ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ತನ್ವೀರ್ ಸೇಠ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.