×
Ad

ಕಸದ ಸಮಸ್ಯೆಯ ಕಗ್ಗಂಟಿಗೆ ಗುತ್ತಿಗೆದಾರರೇ ಹೊಣೆ: ಎನ್.ಎಸ್.ರಮಾಕಾಂತ

Update: 2017-09-24 18:47 IST

ಬೆಂಗಳೂರು, ಸೆ. 24: ಬೆಂಗಳೂರು ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ಪಡೆದವರ ಸ್ವಾರ್ಥ ಹಿತಾಸಕ್ತಿಯಿಂದಾಗಿ ನಗರದಲ್ಲಿ ಕಸದ ಸಮಸ್ಯೆ ಬಗೆಹರಿಯದೆ ಕಗ್ಗಂಟಾಗುತ್ತಿದೆ ಎಂದು ತ್ಯಾಜ್ಯ ವಿಲೇವಾರಿ ತಜ್ಞ ಸಮಿತಿ ಸದಸ್ಯ ಎನ್.ಎಸ್.ರಮಾಕಾಂತ ಆತಂಕ ವ್ಯಕ್ತಪಡಿಸುತ್ತಾರೆ.

ರವಿವಾರ ಹಸಿರು ದಳ, ಘನತ್ಯಾಜ್ಯ ನಿರ್ವಹಣೆ ಕಾರ್ಯಕರ್ತರು, ಶುಚಿ ಮಿತ್ರ ಸೇರಿ ಹಲವು ಸಂಘ, ಸಂಸ್ಥೆಗಳು ನಗರದ ಪುರಭವನದ ಮುಂಭಾಗ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ಜಿಪಿಎಸ್ ಹಾಗೂ ಪೌರಕಾರ್ಮಿಕರ ಹಾಜರಾತಿಗೆ ಬಯೋ ಮೆಟ್ರಿಕ್ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಪರಿಣಾಮಕಾರಿ ವಿಲೇವಾರಿ ಮಾಡಲು ಸರಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಆದರೆ, ಕಸವನ್ನು ವಿಲೇವಾರಿ ಮಾಡುವ ಗುತ್ತಿಗೆದಾರರು ಸರಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಕಸದ ಸಮಸ್ಯೆಯನ್ನು ಮತ್ತಷ್ಟು ಕಗ್ಗಾಂಟಾಗಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಗುತ್ತಿಗೆದಾರರ ಮಾಫಿಯಾ: ಕಸದ ವಿಲೇವಾರಿಗೆ ಬಿಬಿಎಂಪಿ ಪ್ರತೀ ತಿಂಗಳು ಕೋಟ್ಯಂತರ ರೂ.ವೆಚ್ಚ ಮಾಡುತ್ತಿದೆ. ಆದರೆ, ತ್ಯಾಜ್ಯ ಮಾತ್ರ ಪರಿಣಾಮಕಾರಿಯಾಗಿ ವಿಲೇವಾರಿ ಆಗುತ್ತಿಲ್ಲ. ಗುತ್ತಿಗೆದಾರರು ಕಸವನ್ನೇ ಹಣ ಮಾಡುವ ಮಾಫಿಯಾ ಮಾಡಿಕೊಂಡಿರುವುದರಿಂದ ಕಸದ ಸಮಸ್ಯೆ ಬಗೆ ಹರಿಯುತ್ತಿಲ್ಲ ಎಂದು ಹೇಳಿದರು.

ಜಿಪಿಎಸ್ ಅಳವಡಿಕೆ ಅಗತ್ಯ: ಕಸದ ಸಮಸ್ಯೆ ಶಾಶ್ವತವಾಗಿ ಪರಿಣಾಮಕಾರಿಯಾಗಿ ಬಗೆ ಹರಿಯಬೇಕಾದರೆ ಕಸ ವಿಲೇವಾರಿ ಮಾಡುವ ವಾಹನಗಳಿಗೆ ಜಿಪಿಎಸ್ ಯಂತ್ರ ಅಳವಡಿಸುವುದು ಅಗತ್ಯವಾಗಿದೆ. ಆದರೆ, ಗುತ್ತಿಗೆದಾರರು ಇದಕ್ಕೆ ಒಪ್ಪದೆ ಹಳೆಯ ಮಾದರಿಯನ್ನೇ ಅನುಸರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಸರಕಾರ ಗುತ್ತಿಗೆ ದಾರರ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.

ಗುತ್ತಿಗೆದಾರರು ಪ್ರತೀ ವಾರ್ಡ್‌ಗೆ ಕಸ ವಿಲೇವಾರಿಗಾಗಿ 20 ಕ್ಕೂ ಹೆಚ್ಚು ವಾಹನಗಳನ್ನು ನಿಯೋಜಿಸುವುದಾಗಿ ಹೇಳಿ, ಪ್ರತೀ ವಾಹನಕ್ಕೆ ಪ್ರತಿತಿಂಗಳು 40 ಸಾವಿರ ರೂ.ಹಣವನ್ನು ಪಡೆಯಲಾಗುತ್ತದೆ. ಆದರೆ, ಪ್ರತೀ ವಾರ್ಡ್‌ಗೆ ಕೇವಲ 10ವಾಹನಗಳನ್ನು ಮಾತ್ರ ನಿಯೋಜಿಸಿ ಸರಕಾರದ ಹಣವನ್ನು ದೋಚಲಾಗುತ್ತಿದೆ. ಇದನ್ನು ತಡೆಯಬೇಕಾದರೆ ಪ್ರತಿ ವಾಹನಕ್ಕೆ ಜಿಪಿಎಸ್ ಯಂತ್ರ ಅಳವಡಿಕೆ ಅಗತ್ಯವಿದೆ ಎಂದರು.

ಬಯೋವೆುಟ್ರಿಕ್ ಪದ್ಧತಿ ಜಾರಿ: ಪ್ರತೀ ವಾರ್ಡ್‌ಗೂ ಇಷ್ಟು ಪೌರಕಾರ್ಮಿಕರನ್ನು ನೇಮಿಸಬೇಕೆಂದು ಕಡ್ಡಾಯ ಮಾಡಲಾಗಿದೆ. ಅದರಲ್ಲೂ ಗುತ್ತಿಗೆ ದಾರರು ವಂಚಿಸುತ್ತಿದ್ದಾರೆ. ದಾಖಲಾತಿ ಪುಸ್ತಕದಲ್ಲಿ ಹೆಚ್ಚು ಮಂದಿಯ ಹೆಸರನ್ನು ನಮೂಧಿಸಿ, ಕೆಲವರಿಂದ ಮಾತ್ರ ಕೆಲಸವನ್ನು ಮಾಡಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪ್ರತಿ ವಾರ್ಡ್‌ನಲ್ಲೂ ಬಯೋಮೆಟ್ರಿಕ್ ಪದ್ಧತಿ ಜಾರಿಯಾಗಲಿ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಹಸಿರು ದಳದ ಸೌಭಾಗ್ಯ, ಕುಮಾರ್ ಜಾಂಗೀಧಾರ್ ಸೇರಿದಂತೆ ಬೆಂಗಳೂರು ನಗರದ ನೂರಾರು ನಾಗರಿಕು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News