ಬೆಂಗಳೂರು: ಕೆರಯಂಗಳ ತೆರವು ಕಾರ್ಯಾಚರಣೆ
ಬೆಂಗಳೂರು, ಸೆ. 24: ಕೆರೆ ಒತ್ತುವರಿ ತೆರವು ಹಾಗೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೋಳಿವಾಡ ಅವರ ಆದೇಶದ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆ ಅಂಗಳದ ಜಾಗಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ.
ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸಿಂಗಾಪುರ ಗ್ರಾಮದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶನಿವಾರ ಕೈಗೊಳ್ಳಲಾಯಿತು. ಈ ವೇಳೆ ಒತ್ತುವರಿಯಾಗಿದ್ದ 66 ಎಕರೆ 12 ಗುಂಟೆ ಭೂಮಿಯನ್ನು ವಾಪಸ್ ಪಡೆಯಲಾಗಿದೆ. ಇದೇ ರೀತಿ ಜಿಲ್ಲೆಯಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಕೆರೆ ಅಂಗಳದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದೇವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಗ್ರಾಮದ ಸರ್ವೇ ನಂ.123ರಲ್ಲಿ 9.23ಎಕರೆ ಮತ್ತು ಕಣ್ಣೂರು ಸರ್ವೇ ನಂ.35ರಲ್ಲಿ 30ಗುಂಟೆ ಒಳಗೊಂಡು 60ಕೋಟಿ ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಕೆರೆ ಅಂಗಳದ 2.75ಗುಂಟೆ ಜಾಗವನ್ನು ಬಿಬಿಎಂಪಿಯಿಂದಲೇ ಒತ್ತುವರಿ ಮಾಡಲಾಗಿದೆ. ಖಾಸಗಿಯವರು 4.35ಗುಂಟೆ ಜಾಗ ಒತ್ತುವರಿ ಮಾಡಿಕೊಂಡು ಕೆರೆ ಜಾಗದಲ್ಲೇ ರಸ್ತೆ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.