ಮತ ಭಿಕ್ಷೆಗೆ ಜನರ ಬಳಿಗೆ ಹೋಗುವ ನಾವು ಬೀದಿ ದಾಸಯ್ಯಗಳೇ: ಸಿಎಂ ಸಿದ್ದರಾಮಯ್ಯ
ಚಿತ್ರದುರ್ಗ, ಸೆ. 24: ಮತ ಭಿಕ್ಷೆಗೆ ಜನರ ಮುಂದೆ ಹೋಗುವ ನಾವು ಬೀದಿ ದಾಸಯ್ಯಗಳೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪರಿಗೆ ಮೆದುಳು ಇಲ್ಲ. ಬುದ್ಧಿಯೂ ಕಡಿಮೆ. ದಾಸಯ್ಯ ಎಂದರೆ ಯಾರು? ಭಿಕ್ಷೆ ಬೇಡುವವರು. ಪ್ರಜಾಪ್ರಭುತ್ವದಲ್ಲಿ ಜನರೇ ನಮ್ಮ ಮಾಲಕರು. ಅವರ ಬಳಿ ಮತ ಭಿಕ್ಷೆ ಬೇಡುವ ಎಲ್ಲರೂ ದಾಸಯ್ಯಗಳೇ ಎಂದರು.
ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲಿರುವುದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ತಮಗೆ ಇದೆ ಎಂದು ನುಡಿದರು.
ಮಹಾದಾಯಿ ನದಿ ನೀರು ಹಂಚಿಕೆ ವಿಚಾರದ ಬಗ್ಗೆ ಗೋವಾ ಸಿಎಂ ಜೊತೆ ರಾಜ್ಯ ಬಿಜೆಪಿ ನಾಯಕರು ನಾಳೆ ಚರ್ಚೆ ನಡೆಸಲಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ ಅಂಶಗಳ ಬಗ್ಗೆ ಅವರು ಮಾತುಕತೆ ನಡೆಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.
ಬಿಜೆಪಿ ನಾಯಕರು ಗೋವಾ ಸಿಎಂ ಜೊತೆ ಚರ್ಚಿಸಿ ವಿವಾದ ಬಗೆಹರಿಸಿಕೊಳ್ಳಲು ಮಾತುಕತೆಗೆ ಮುಂದಾಗುವಂತೆ ಅವರ ಮನ ವೊಲಿಸಲಿ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಸರಕಾರ ಕೇಸು ದಾಖಲು ಮಾಡಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಎಸಿಬಿ ಕೇಸು ದಾಖಲು ಮಾಡಿಕೊಂಡಿದೆ. ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ. ಇದಕ್ಕೂ ಸರಕಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ತಡೆ ಆದೇಶ ನೀಡುವ ವೇಳೆ ಹೈಕೋರ್ಟ್ ಯಡಿಯೂರಪ್ಪ ಅವರಿಗೆ ಕಿರುಕುಳ ನೀಡಲು ಕೇಸು ದಾಖಲು ಮಾಡಲಾಗಿದೆ ಎಂದು ಹೇಳಿದೆಯೇ? ಸರಕಾರ ತಮಗೆ ತೊಂದರೆ ನೀಡುತ್ತಿದೆ ಎಂಬ ಯಡಿಯೂರಪ್ಪ ಅವರ ಆರೋಪ ಸುಳ್ಳು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಬಿಬಿಎಂಪಿ ಮೇಯರ್ ಚುನಾವಣೆ ವಿಚಾರದಲ್ಲಿ ಸಂಸದ ಡಿ.ಕೆ.ಸುರೇಶ್ ಜತೆ ಭಿನ್ನಾಭಿಪ್ರಾಯ ಇಲ್ಲ. ತಮ್ಮ ಕ್ಷೇತ್ರದ ಬಿಬಿಎಂಪಿ ಸದಸ್ಯರಿಗೆ ಮೇಯರ್ ಸ್ಥಾನ ನೀಡುವಂತೆ ಅವರು ಕೇಳಿದ್ದಾರೆ ಅಷ್ಟೆ. ಈ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕಾರ್ಯಕ್ರಮದ ಕಾಪಿ ಮಾಡಿ ‘ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ’ ಆಯೋಜಿಸಲಾಗಿದೆ ಎಂಬ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪ ಸಲ್ಲ. 2013ರ ವಿಧಾನಸಭಾ ಚುನಾವಣೆ ವೇಳೆ ‘ಕಾಂಗ್ರೆಸ್ ನಡಿಗೆ ಜನರ ಬಳಿಗೆ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ನಮ್ಮ ಪಕ್ಷದ ಕಾಪಿಯೇ? ಎಂದು ಅವರು ಪ್ರಶ್ನಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರೋಧ ಹೋರಾಟಕ್ಕೂ ಸರಕಾರಕ್ಕೂ ಸಂಬಂಧ ಇಲ್ಲ ಎಂದ ಅವರು, ಈ ವಿಷಯದಲ್ಲಿ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಮಂತ್ರಿಗಳಿಗೆ ಸ್ವಾತಂತ್ರ್ಯ ಇದೆ. ಆದರೆ ಅದು ಸರಕಾರದ ನಿಲುವು ಆಗುವುದಿಲ್ಲ. ವೈಯಕ್ತಿಕವಾಗಿ ಮಾತನಾಡಬೇಡಿ ಎಂದು ಅವರ ಬಾಯಿ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.